ಹೆಮ್ಮಾಡಿ: ವಿದ್ಯಾರ್ಥಿ ವೇದಿಕೆ ಉದ್ಘಾಟನೆ
ಕುಂದಾಪುರ: ಜೀವನದ ಎಲ್ಲಾ ಪರೀಕ್ಷೆಗಳಿಗಿಂತಲೂ ಬದುಕು ದೊಡ್ಡದು. ಪ್ರಯತ್ನದಲ್ಲಿ ಭ್ರಮಗೆ ಒಳಗಾಗದೆ ಸಾಮರ್ಥ್ಯವನ್ನು ವೃದ್ಧಿಸಲು ಸದಾ ಅಧ್ಯಯನ, ಅನುಭವ ಮತ್ತು ಅಭಿವ್ಯಕ್ತಿಯಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕೋಟ ವಿವೇಕ ಬಾಲಕಿಯರ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ತಿಳಿಸಿದರು.
ಅವರು ಹೆಮ್ಮಾಡಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕ್ಷಣಿಕವಾಗಿ ಮುದ ನೀಡುವ ವ್ಯಸನಗಳನ್ನು ಬಿಟ್ಟು ಸದೃಡವಾದ ದೇಹದಲ್ಲಿ ಮನಸ್ಸು ಸದಾ ಆನಂದವಾಗಿರಬೇಕಾದರೆ ನಿಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ವಿದ್ಯಾರ್ಥಿ ವೇದಿಕೆಯ ಮೂಲಕ ಸಾಕಾರಗೊಳಿಸಿಕೊಂಡಾಗ ಸುಂದರ ಬದುಕು ನಿಮ್ಮದಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ. ಸೀತಾರಾಮ ಮಧ್ಯಸ್ಥ ಅವರು ವಿದ್ಯಾರ್ಥಿ ವೇದಿಕೆ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ಗಣಕ ವಿಜ್ಞಾನ ಉಪನ್ಯಾಸಕ ವಿದ್ಯಾರ್ಥಿ ವೇದಿಕೆಯ ಸದಸ್ಯರನ್ನು ಪರಿಚಯಿಸಿದರು. ಜನತಾ ಪ್ರೌಢಶಾಲಾ ಮುಖ್ಯ ಶಿಕ್ಷಕ ನಂದಿ ದೇವಾಡಿಗ, ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ರಕ್ಷತ್, ಉಪಾಧ್ಯಕ್ಷ ನಿತೇಶ್ ಬಂಗೇರ ಇದ್ದರು. ಕನ್ನಡ ಭಾಷಾ ಉಪನ್ಯಾಸಕ ಮಂಜುನಾಥ .ಕೆ.ಎಸ್ ಸ್ವಾಗತಿಸಿದರು. ಸುಧಾಕರ ವಕ್ವಾಡಿ ನಿರೂಪಿಸಿದರು. ಮಂಜುನಾಥ ಚಂದನ್ ವಂದಿಸಿದರು.
ಗೀತಾ ಜೋಷಿ ಮತ್ತು ರೇಶ್ಮಾ ಡಿ' ಸೋಜ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.