ಮಲೇರಿಯಾಗೆ ವಿಶ್ವದೆಲ್ಲೆಡೆ ನಿಮಿಷಕ್ಕೆ ಒಂದು ಬಲಿ: ಡಾ. ಯಶೋಧರ್ ಆತಂಕ
ಕಾರ್ಕಳ: ವಿಶ್ವದೆಲ್ಲೆಡೆ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಿಮಿಷಕ್ಕೊಂದು ಬಲಿಯಾಗುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡದಿದ್ದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಬಹುದೆಂದು ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಯಶೋಧರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂತಾವರ-ಸಾಣೂರು ಪ್ರಕೃತಿ ವಿದ್ಯಾ ಸಂಸ್ಥೆ ಹಾಗೂ ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ ಮಲೇರಿಯಾ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂತಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಮಾತಾನಾಡಿ, ನೈರ್ಮಲ್ಯ ಇಲ್ಲದಿರುವುದೇ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ರೋಗ ಹೆಚ್ಚಳವಾಗಲು ಕಾರಣ. ಮಲೇರಿಯಾ, ಡೆಂಘೀ, ಪೈಲೇರಿಯಾ, ಚಿಕನ್ ಗುನ್ಯ ಇವೆಲ್ಲವೂ ಸಾಂಕ್ರಾಮಿಕ ರೋಗಗಳಾಗಿದ್ದು ಇವು ಸೊಳ್ಳೆಯಿಂದ ಹರಡುವ ಕಾಯಿಲೆ ಎಂದರು.
ಮಲೇರಿಯಾ ಜ್ವರ ಪೀಡಿತರಲ್ಲಿ ಶೇ. 90 ಮಂದಿ ಐದು ವರ್ಷದೊಳಗಿನ ಮಕ್ಕಳು ಎಂದ ಅವರು, ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿರುವುದು ಇದಕ್ಕೆ ಕಾರಣ ಎಂದು ತಿಳಿಸಿದರು.
ಜಾಗೃತಿ ಜಾಥಾ: ಕಾಂತಾವರ ವಿದ್ಯಾ ಸಂಸ್ಥೆಯಿಂದ ಹೊರಟ ಜಾಗೃತಿ ಜಾಥಾವನ್ನು ಸಾಣೂರು ಗ್ರಾಮ ಪಂಚಾಯಿತಿ ಪರಿಸರದಲ್ಲಿ ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಕೋಟ್ಯಾನ್ ಸ್ವಾಗತಿಸಿದರು.
ಜಾಗೃತಿ ಜಾಥಾ ಕಾರ್ಕಳ ತಲುಪಿದ ಬಳಿಕ ಅನಂತಶಯನ ದೇವಳ ಪರಿಸರದಿಂದ ಹೊರಟ ಕಾಲ್ನಡಿಗೆಯಲ್ಲಿ ವಿದ್ಯಾರ್ಥಿಗಳು ಪರಿಸರ ಮತ್ತು ಆರೋಗ್ಯದ ಬಗ್ಗೆ ಘೋಷಣೆ ಕೂಗಿ, ಜನಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಿದರು.
ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜ್ಞಾನೇಶ್ ಕಾಮತ್ ಜಾಥಾವನ್ನು ಸ್ವಾಗತಿಸಿದರು.
ಆರೋಗ್ಯ ನಿರೀಕ್ಷಕರಾದ ಕೃಷ್ಣಾನಂದ ಶೆಟ್ಟಿ, ಗೋಪಾಲ ಶೆಟ್ಟಿ, ಪ್ರಕೃತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಅಶೋಕ್ ಕುಮಾರ್, ಕಾಲೇಜು ಪ್ರಾಂಶುಪಾಲ ರಾಘವೇಂದ್ರ ಶೆಣೈ, ಶಾಲಾ ಪ್ರಾಂಶುಪಾಲ ಗಜಾನನ ಭಟ್ ಇದ್ದರು.
ವಿನಾಯಕ ಜೋಗ್ ನಿರೂಪಿಸಿದರು.
ರೋಹಿತ್ ಸ್ವಾಗತಿಸಿದರು. ಪೌಲ್ ನಿರೂಪಿಸಿದರು. ಕಾಜೊಲ್ ವಂದಿಸಿದರು.