ಶಾಲಾ ದೂರು ಪೆಟ್ಟಿಗೆಗೆ ಉತ್ತಮ ಪ್ರತಿಕ್ರಿಯೆ
ಪಡುಬಿದ್ರಿ: ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಆಯಾ ಸಂಸ್ಥೆಗಳಲ್ಲಿ ಅಳವಡಿಸಲಾಗಿರುವ ದೂರು ಪೆಟ್ಟಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾದಕವಸ್ತು ಬಳಕೆ, ಸರಬರಾಜು, ಅಕ್ರಮ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬರೆಯದೆ ದೂರು ನೀಡಬಹುದು. ಇದರಿಂದ ಸಮಾಜದಲ್ಲಿ ಅನೇಕ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಸಾಧ್ಯವಿದೆ ಎಂದು ಕಾರ್ಕಳ ಉಪವಿಭಾಗದ ಎಎಸ್ಪಿ ಕೆ. ಅಣ್ಣಾಮಲೈ ಹೇಳಿದರು.
ಅವರು ಪಡುಬಿದ್ರಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಇಲಾಖೆ ವತಿಯಿಂದ ಅಳವಡಿಸಲಾಗಿರುವ ದೂರು ಪೆಟ್ಟಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಕಳ, ನಿಟ್ಟೆ, ಕಾಪುಗಳಲ್ಲಿ ಈಗಾಗಲೇ ದೂರು ಪೆಟ್ಟಿಗೆಗೆ ದೂರುಗಳು ಬರಲಾರಂಭಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಪ್ರತಿ ಸೋಮವಾರ ಆಯಾ ಠಾಣೆ ನಿರೀಕ್ಷಕರು ದೂರುಗಳನ್ನು ಪರಿಶೀಲಿಸಲಿದ್ದಾರೆ ಎಂದವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ, ಗ್ರಾಪಂ ಅಧ್ಯಕ್ಷ ವಿಜಯ ಎಂ. ಅಮೀನ್, ಕಾಪು ವೃತ್ತ ನಿರೀಕ್ಷಕ ಸುನಿಲ್ ನಾಯಕ್, ಪಡುಬಿದ್ರಿ ಠಾಣಾಧಿಕಾರಿ ಅಜ್ಮತ್ ಆಲಿ, ಪ್ರಾಂಶುಪಾಲೆ ವಿಜಯಲಕ್ಷ್ಮಿ ನಾಯಕ್ ಇದ್ದರು. ಇದೇ ವೇಳೆ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು.