'ಸೇವಾ ಮನೋಭಾವವಿದ್ದರೆ ಯಶಸ್ಸು ಸಾಧ್ಯ'
ಉಡುಪಿ: ಸಮಾಜ ಸೇವೆ ಸವಾಲಿನ ಕ್ಷೇತ್ರವಾಗಿದ್ದು, ಸೇವೆಯ ಪರಿಕಲ್ಪನೆ ಕಾಲ- ಕಾಲಕ್ಕೆ ಬದಲಾಗುತ್ತದೆ. ಬದಲಾವಣೆಯ ವೇಗಕ್ಕೆ ಹೊಂದಿಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ. ಅವರು ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರ ಅಭ್ಯಾಸ ವರ್ಗದ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನೇರಳಕಟ್ಟೆ ದೇವದಾಸ ನಾಯಕ್ ಅಭ್ಯಾಸವರ್ಗ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿದ್ದಾಪುರ ಗೋಪಿನಾಥ ಕಾಮತ್, ಕಟಪಾಡಿ ಸತ್ಯೇಂದ್ರ ಪೈ ಭಾಗವಹಿಸಿದ್ದರು. ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೋಟಾ ಜಿ. ಸತೀಶ್ ಹೆಗ್ಡೆ ಸ್ವಾಗತಿಸಿ, ಸಂಚಾಲಕ ಆರ್. ವಿವೇಕಾನಂದ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭ್ಯಾಸವರ್ಗದ ವಿವಿಧ ಗೋಷ್ಠಿಗಳು ಮತ್ತು ಕಾರ್ಯಕಲಾಪಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ತಿಕ್ ಪೈ ನಿರೂಪಿಸಿ, ಸಚ್ಚೇರಿಪೇಟೆ ರಾಮಚಂದ್ರ ನಾಯಕ್ ವಂದಿಸಿದರು.
ಗಿಡಮೂಲಿಕೆಗಳ ಮಹತ್ವ ಕುರಿತ ಶಿಬಿರ
ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಆಯುರ್ವೇದದಲ್ಲಿ ಗಿಡಮೂಲಿಕೆಗಳ ಮಹತ್ವ ಶಿಬಿರವು ಇತ್ತೀಚೆಗೆ ನಗರದಲ್ಲಿ ನಡೆಯಿತು. ಆಯುರ್ವೇದ ಪಂಡಿತ ಎಂ. ಗೋಪಾಲಕೃಷ್ಣ ಮಲ್ಯ ಅವರು ವಿವಿಧ ಔಷಧೀಯ ಗಿಡಗಳನ್ನು ಮತ್ತು ಔಷಧಿಗಳನ್ನು ಪರಿಚಯಿಸಿದರು. ಶಿಬಿರದಲ್ಲಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಭುಜಂಗ ಶೆಟ್ಟಿ, ಆಸಾರಾಮ ಬಾಪೂ ಅವರ ಭಕ್ತರಾದ ಸತೀಶ್ ಪಡಿಯಾರ್, ಮಾತಾ ಅಮೃತಾನಂದಮಯಿ ಸಂಸ್ಥೆಯ ಆನಂದ ಅಮೀನ್ ಹಾಗೂ ಇತರ ಸಂಘಟನೆಯ 25 ಜನರು ಉಪಸ್ಥಿತರಿದ್ದರು.