ಕನಿಷ್ಠ ಪಿಂಚಣಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಉಡುಪಿ: ಹಿಂದಿನ ಯುಪಿಎ ಸರ್ಕಾರ ಘೋಷಿಸಿದ ಕನಿಷ್ಠ ಪಿಂಚಣಿ 1000 ಜಾರಿಗೆಗೊಳಿಸುವಂತೆ ಒತ್ತಾಯಿಸಿ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯ ವತಿಯಿಂದ ಭವಿಷ್ಯ ನಿಧಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಭವಿಷ್ಯ ನಿಧಿ ಪಿಂಚಣಿದಾರರ ಬಹುಮುಖ್ಯ ಬೇಡಿಕೆಯಾದ ಕನಿಷ್ಠ 1000 ಪಿಂಚಣಿ ನೀಡಬೇಕು ಎಂಬುದನ್ನು ಹಿಂದಿನ ಸರ್ಕಾರ ಒಪ್ಪಿದ್ದು, ಸಿಪಿಟಿ ಕಮಿಟಿ ತೆಗೆದುಕೊಂಡ ತೀರ್ಮಾನದ ಪ್ರಕಾರ ಏ.1ರಿಂದಲೇ ಕಾರ್ಮಿಕರಿಗೆ ಪಿಂಚಣಿ ಸಿಗಬೇಕಾಗಿತ್ತು.
ಆದರೆ, ಚುನಾವಣೆಯ ಕಾರಣ ಸರ್ಕಾರ ಈ ಬೇಡಿಕೆಯನ್ನು ಕಡೆಗಣಿಸಿ ಗಜೆಟ್ ಪ್ರಕಟನೆ ಹೊರಡಿಸದೇ ಇದ್ದ ಕಾರಣ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದು ನೂತನ ಸರ್ಕಾರ ಕನಿಷ್ಠ ಪಿಂಚಣಿ 1000 ನೀಡುವ ನಿರ್ಧಾರವನ್ನು ಆದಷ್ಟು ಬೇಗ ಜಾರಿಗೆ ತರಬೇಕು. ಪಿಎಫ್ ಮೇಲಿನ ಕಡಿತ 6500ರಿಂದ 15000ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶಂಕರ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಪಿ. ವಿಶ್ವನಾಥ ರೈ, ಎಚ್. ನರಸಿಂಹ, ಬಲ್ಕೀಸ್ ವಹಿಸಿದ್ದರು.