ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಿಮೆಂಟ್ ಪರ್ಯಾಯ ವಸ್ತು ಆವಿಷ್ಕಾರ
ಉಡುಪಿ: ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಡ್ಮೆಂಟ್ ಸಂಸ್ಥೆಯ ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಉತ್ಪನ್ನ ತಯಾರಿಕಾ ಕಂಪೆನಿಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯ 'ಪಿವಿಸಿ ಧೂಳ'ನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿಗೊಳಿಸಲು ಒಂದು ಹೊಸ ವಿಧಾನವನ್ನು ಆವಿಷ್ಕರಿಸಿದ್ದಾರೆ.
ಈ ಪರಿಸರ- ಆರೋಗ್ಯ ಮಾರಕ ಪ್ಲಾಸ್ಟಿಕ್ ತ್ಯಾಜ್ಯ 'ಪಿವಿಸಿ ಧೂಳ'ನ್ನು ಕಾಂಕ್ರೀಟ್ನಲ್ಲಿ ಸಿಮೆಂಟ್ಗೆ ಬದಲಿಯಾಗಿ ಉಪಯೋಗಿಸಲು ಸಾಧ್ಯವಿದೆ ಎಂಬುದನ್ನು ಈ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಹೀಗೆ ಅಭಿವೃದ್ಧಿಪಡಿಸಿದ ಕಾಂಕ್ರಿಟ್ ಆರ್ಥಿಕ ಮಿತವ್ಯಯಿ ಎಂಬುದನ್ನೂ ಸಾಬೀತು ಮಾಡಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯಿಂದ ಆರ್ಥಿಕ ಸಹಕಾರವನ್ನೂ ಪಡೆದುಕೊಂಡಿದ್ದಾರೆ.
ಈ ಹೊಸ ಅವಿಷ್ಕಾರ ಮಾಡಿದ ಸಿವಿಲ್ ಎಂಜಿನಿಯರಿಂಗ್ನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರಾಹುಲ್ ವಿ. ಕೋಟ್ಯಾನ್, ಪ್ರಸನ್ನ ಎನ್. ಭಟ್ ಮತ್ತು ಶಶಾಂಕ್ ಜಿ. ಹೆಗ್ಡೆ ಅವರಿಗೆ ಕಾಲೇಜಿನ ಹಿರಿಯ ಉಪನ್ಯಾಸಕ ಡಾ. ಆನಂದ್ ವಿ.ಆರ್. ಮಾರ್ಗದರ್ಶನ ನೀಡಿದ್ದರು.
ಸಂಸ್ಥೆಯ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಎಸ್. ಐತಾಳ್, ಶೈಕ್ಷಣಿಕ ಡೀನ್ ಪ್ರೊ.ಎ. ಗಣೇಶ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಬಿ. ರಾಧೇಶ್ಯಾಮ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.