ಮೂರು ದಿನದೊಳಗೆ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ: ಡಿಸಿ
ಮಣಿಪಾಲ: ಯಾವುದೇ ಕಾರಣಕ್ಕೂ ಖಾಸಗಿ ಬಸ್ ಮಾಲೀಕರು ತಮ್ಮಿಷ್ಟದಂತೆ ಏಕಮುಖಿ ನಿರ್ಧಾರ ತೆಗೆದುಕೊಂಡು ಬಸ್ ದರ ಏರಿಕೆ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರು ಬಸ್ ಮಾಲೀಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಬಸ್ ದರ ಪರಿಷ್ಕರಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಸ್ ದರ ಪರಿಷ್ಕರಣೆಯ ಬಗ್ಗೆ 3 ದಿನಗಳೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ಬಸ್ ಸಿಬ್ಬಂದಿ- ಮಾಲೀಕರ ಬಗ್ಗೆ, ಬೇಕಾಬಿಟ್ಟಿ ಏರಿಕೆಯಾಗಿರುವ ಬಸ್ ಪ್ರಯಾಣ ದರ, ಬಸ್‌ಗಳ ಸೇವೆಯ ಅವ್ಯವಸ್ಥೆಗಳ ಸಾರ್ವಜನಿಕರ ದೂರುಗಳನ್ನು ಹಾಗೂ ಬಸ್ ಮಾಲೀಕರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಉದ್ಯಮ ಲಾಭವಿಲ್ಲದೆ ನಡೆಸಲಿರುವುದಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಯ ಉದ್ಯಮಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾಗಬೇಕು. ಬಸ್‌ಗಳನ್ನು ನಿರ್ವಹಿಸುವಾಗ ಅದಕ್ಕೆ ಸಂಬಂಧಿಸಿದ ಎಲ್ಲ ಕಾನೂನುನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಸ್ಪಿ ಡಾ. ಬೋರಲಿಂಗಯ್ಯ ಮಾತನಾಡಿ, ವೇಗ ಮಿತಿ ಪಾಲನೆ, ಕುಡಿದು ಬಸ್ ಚಲಾಯಿಸುವ ಬಗ್ಗೆ, ಸಮವಸ್ತ್ರ ಧರಿಸುವ ಬಗ್ಗೆ, ರಸ್ತೆ ಸುರಕ್ಷತೆ, ಕರ್ಕಶ ಹಾರ್ನ್ ಬಳಕೆ ಬಗ್ಗೆ ಬಸ್ ಮಾಲೀಕರು ಹೆಚ್ಚಿನ ನಿಗಾ ವಹಿಸಬೇಕೆಂದರು. ಜಿಲ್ಲಾ ಬಳಕೆದಾರರ ವೇದಿಕೆ, ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆರ್‌ಟಿಒ ಅರುಣ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು.
'ಸೇವೆ' ಅರ್ಥ ಕಳೆದುಕೊಂಡಿದೆ...
ಬಸ್ ಸಿಬ್ಬಂದಿ ಸೌಜನ್ಯರಹಿತ ವರ್ತನೆ, ಮೀಸಲಿರಿಸಿದ ಸೀಟುಗಳ ದುರ್ಬಳಕೆ, ಮಿತಿಯುಲ್ಲದ ವೇಗ, ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರ ಇಲ್ಲದಿರುವುದು, ಸಾರ್ವಜನಿಕರಿಗೆ ಅನನುಕೂಲವಾಗುವ ರೀತಿಯಲ್ಲಿ ಟ್ರಿಪ್ ರದ್ದು ಮಾಡುವಂತಹ ಅವ್ಯವಸ್ಥೆಯಿಂದಾಗಿ ಬಸ್‌ಗಳು 'ಸೇವೆ' ಎಂಬ ಶಬ್ದ ಅರ್ಥ ಕಳೆದುಕೊಂಡಿದೆ. ಮುಂದೆ ಹಾಗಾಗದಂತೆ ಬಸ್ ಮಾಲೀಕರು ಹಾಗೂ ಬಸ್ ಸಿಬ್ಬಂದಿ ಎಚ್ಚರಿವಹಿಸಬೇಕು.