ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಹಕಾರಿ ಬ್ಯಾಂಕ್‌ಗಳಲ್ಲಿ ಜನರ ಹಣಕ್ಕೆ ಹೆಚ್ಚಿನ ಭದ್ರತೆ: ರಾಜೇಂದ್ರ ಕುಮಾರ್

Lingaraj Badiger
Updated On : 17 Jun 2014, 11:29 am

ಉಡುಪಿ: ಸಹಕಾರ ಸಂಘಗಳಲ್ಲಿ ಹೂಡಿದ ಹಣ ಆ ಪ್ರದೇಶ - ಜನರ ಅಭಿವೃದ್ಧಿಗೆ ನೇರವಾಗಿ ಬಳಕೆಯಾಗುತ್ತದೆ. ಇತರ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಭದ್ರತೆ ಇಂದು ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆ. ಆದ್ದರಿಂದ ಜನರು ತಮ್ಮ ಹಣದ ಸದ್ವಿನಿಯೋಗ ಮತ್ತು ಲಾಭದ ದೃಷ್ಟಿಯಂದ ಧೈರ್ಯವಾಗಿ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಹೂಡಬಹುದು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಅವರು ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಮಲ್ಯ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಸಂಪೂರ್ಣ ಗಣಕೀಕೃತ ಮತ್ತು ಏಕಗವಾಕ್ಷಿ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 71ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಗ್ರಾಹಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಪ್ರಾರಂಭಿಸಲಾಗುತ್ತಿದೆ. ಯಾವುದೇ ವಾಣಿಜ್ಯ ಬ್ಯಾಂಕ್ ಧೈರ್ಯ ಮಾಡದ, ಗ್ರಾಮೀಣ ಪ್ರದೇಶದ ರೈತರಿಗೆ -ರುಪೇ ಕಿಸಾನ್ ಕಾರ್ಡ್ ಯೋಜನೆಯನ್ನು ತಮ್ಮ ಕೈಗೆತ್ತಿಕೊಂಡಿದೆ. ಈಗಾಗಲೇ 90 ಸಾವಿರ ರುಪೇ ಕಾರ್ಡ್ ನೀಡಲಾಗಿದೆ. ಈ ಕಾರ್ಡ್‌ಗೆ ರೈತರನ್ನು ಹೊರತುಪಡಿಸಿ ಬೇರೆ ಕ್ಷೇತ್ರದ ಜನರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಸಕರಾತ್ಮಕವಾಗಿ ಪರಿಶೀಲಿಸಲಾಗುತ್ತಿದೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಗ್ರಾಹಕ ಸೇವೆಯೇ ಜೀವಾಳವಾಗಿದೆ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಸಾಲ ನೀಡುವಾಗ ಸತಾಯಿಸದೆ, ಸಾಲಗಾರರನ್ನು ಗೌರವಯುತವಾಗಿ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಗಂಗೊಳ್ಳಿ ಶಾಖೆಯನ್ನು ಉದ್ಘಾಟಿಸಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿದರು.
ನೂತನ ಶಾಖೆಯ ಗಣಕೀಕರಣ ವಿಭಾಗವನ್ನು ಸ್ಥಳೀಯ ತಾ.ಪಂ. ಸದಸ್ಯೆ ಪೂರ್ಣಿಮಾ ಎಂ. ಖಾರ್ವಿ, ಭದ್ರತಾ ಕೋಶವನ್ನು ಜಿ.ಪಂ. ಸದಸ್ಯ ಆನಂತ ಮೊವಾಡಿ ಉದ್ಘಾಟಿಸಿದರು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಆರ್. ಖಾರ್ವಿ, ಉದ್ಯಮಿಗಳಾದ ಎಚ್. ಗಣೇಶ ಕಾಮತ್ ಮತ್ತು ಜಿ. ಮಹಮ್ಮದ್, ಗಂಗೊಳ್ಳಿ ಚರ್ಚ್‌ನ ಧರ್ಮಗುರು ಅಲ್ಫೋನ್ಸ್  ಡಿಲಿಮಾ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್. ರಾಜು ಪೂಜಾರಿ, ಹಿರಿಯ ಸಹಕಾರಿಗಳಾದ ರಘುರಾಮ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಹಕಾರ ಸಂಘಗಳ ಅಧ್ಯಕ್ಷರಾದ ರಾಜು ದೇವಾಡಿಗ, ನಾಗ ಖಾರ್ವಿ, ಆನಂದ ಬಿಲ್ಲವ, ಮಧುಕರ, ವಿಶ್ವೇಶ್ವರ ಅಡಿಗ, ಸತೀಶ್ ಎಂ. ನಾಯಕ್ ಇದ್ದರು.
ಕಟ್ಟಡ ಮಾಲೀಕರಾದ ವೆಂಕಟೇಶ ಮಲ್ಯ, ನೂತನ ಶಾಖಾ ವ್ಯವಸ್ಥಾಪಕ ಮೋಹನದಾಸ ಹೆಬ್ಬಾರ್ ಮರವಂತೆ, ಮಹಾಪ್ರಬಂದಕ ಬಾಬು ಬಿಲ್ಲವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚೈತನ್ಯ ವಿಮಾದ ಚೆಕ್ ವಿತರಿಸಲಾಯಿತು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ಶಾಖೆಯ ಮಹಾ ಪ್ರಬಂಧಕ ಬಾಬು ಬಿಲ್ಲವ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement