ಸೊಸೆ ಕೊಂದ ನಾಗಪ್ಪ ಗೌಡ ಮಡಿಕೇರಿಗೆ ಪರಾರಿ: ಶಂಕೆ
ಸುಬ್ರಹ್ಮಣ್ಯ: ಉಪ್ಪುಕಳದಲ್ಲಿ ತನ್ನ ಸೊಸೆಯನ್ನು ಶನಿವಾರ ಬಂದೂಕಿನಿಂದ ಗುಂಡಿಕ್ಕಿ ಕೊಂದ ಆರೋಪಿ ನಾಗಪ್ಪ ಗೌಡ ತಲೆಮರೆಸಿಕೊಂಡಿದ್ದು, ಮೂರು ದಿನಗಳಾದರೂ ಆರೋಪಿಯ ಪತ್ತೆಯಾಗಿಲ್ಲ.
ಕೊಲೆ ನಡೆಸಿದ ಬಳಿಕ ಕಾಡಿನತ್ತ ಪಲಾಯನ ಮಾಡಿದ್ದ ಆರೋಪಿ ಕಾಡಿನಲ್ಲಿ ಅವಿತು ಕುಳಿತಿರುವ ಸಾಧ್ಯತೆ ಹೆಚ್ಚಾಗಿದ್ದು ಈ ಮಧ್ಯೆ ಮಡಿಕೇರಿ ಕಡೆ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಭಾನುವಾರ ಮಧ್ಯಾಹ್ನದ ವೇಳೆಗೆ ಕೊತ್ನಡ್ಕ ಎಂಬಲ್ಲಿ ಯುವತಿಗೆ ಕಂಡು ಬಂದ ಆರೋಪಿ ಅಲ್ಲಿಂದ ಪರಾರಿಯಾಗಿ ಕಾಡು ಸೇರಿರುವುದನ್ನು ಸ್ಥಳೀಯರು ಕಂಡಿದ್ದಾರೆ.
ಬಳಿಕ ಕಾಡಿನೊಳಗಿನಿಂದ ಒಂದೆರಡು ಬಾರಿ ಗುಂಡಿನ ಸದ್ದು ಕೇಳಿ ಬಂದಿದ್ದು, ಗೌಡರು ಸ್ಥಳೀಯ ಕಾಡಿನಲ್ಲಿ ಇರುವುದಕ್ಕೆ ಪುಷ್ಟಿ ನೀಡಿದೆ. ಸೋಮವಾರ ಸಂಜೆಯವರೆಗೆ ಯಾವುದೇ ಗುಂಡಿನ ಸದ್ದು ಆಗಲಿ ಕೇಳಿ ಬಂದಿಲ್ಲ.
ಹಾಗಾಗಿ ಗೌಡ ಕಾಡು ದಾರಿಯ ಮೂಲಕ ಮಡಿಕೇರಿ ಕಡೆ ತೆರಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆರೋಪಿಗೆ ಹುಡುಕಾಟ: ಪೊಲೀಸರು ಮತ್ತು ಗೃಹ ರಕ್ಷಕದಳ ಸ್ಥಳೀಯರ ನೆರವಿನೊಂದಿಗೆ ಆರೋಪಿಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದು ಆರೋಪಿ ಕೈಯಲ್ಲಿ ಬಂದೂಕು ಇರುವುದರಿಂದ ಸಿಬ್ಬಂದಿಗೂ ಕಾಡಿನೊಳಗಡೆ ತೆರಳಲು ಭಯ ಹುಟ್ಟಿದೆ.
ಮೃತ ವಿದ್ಯಾ ಮನೆಗೆ ಪೊಲೀಸ್ ಕಾವಲು ಒದಗಿಸಲಾಗಿದ್ದು ಆರೋಪಿ ಪತ್ತೆಯಾಗುವವರೆಗೆ ಈ ಭಾಗದಲ್ಲಿ ಭಯ ನಿವಾರಣೆಯಾಗದು.
ಹಾಗಾಗಿ ಎ.ಎನ್.ಎಫ್. ಯೋಧರನ್ನು ತರಿಸಿ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿ ಹಂತಕನ ಪತ್ತೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.