ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸಿದಲ್ಲಿ ಸಂಸದೆ ವಿರುದ್ಧ ಪ್ರತಿಭಟನೆ: ದಸಂಸ
ಪಡುಬಿದ್ರಿ: ಇತ್ತೀಚಗೆ ಸಂಸದೆ ಶೋಭಾ ಕರಂದ್ಲಾಜೆ ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಾಣ ಶತಸಿದ್ದ ಎಂದು ನೀಡಿರುವ ಹೇಳಿಕೆಯನ್ನು ಕರ್ನಾಟಕ ದಸಂಸ ಖಂಡಿಸಿದ್ದು, ಒಂದು ವೇಳೆ ಬೈಪಾಸ್ ಯೋಜನೆಗೆ ಮುಂದಾದಲ್ಲಿ ಸಂಸದರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಸಂಸ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸಮಿತಿ ರಾಜ್ಯ ವಿಭಾಗೀಯ ಸಂಚಾಲಕ ಶೇಖರ್ ಹೆಜ್ಮಾಡಿ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಪಡುಬಿದ್ರಿ ಬೈಪಾಸ್ ರಚನೆ ತೀರಾ ದುಬಾರಿಯಾಗುವುದು ಮಾತ್ರವಲ್ಲ, ಪಾದೆಬೆಟ್ಟು- ಪಡುಬಿದ್ರಿ ಬೀಡು ತನಕ ಸುಮಾರು 3 ಕಿ.ಮಿ. ವ್ಯಾಪ್ತಿಯಲ್ಲಿ 100ಕ್ಕೂ ಮಿಕ್ಕಿ ದಲಿತರ ಮನೆ-ನಿವೇಶನಗಳು ಆಹುತಿಯಾಗುತ್ತವೆ. ಈ ಬಗ್ಗೆ ಈ ಹಿಂದೆಯೂ ಪ್ರತಿಭಟನೆ ಮಾಡಲಾಗಿತ್ತು. ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಶಿಫಾರಸಿನ ಮೇರೆಗೆ ಕೇಂದ್ರ ಭೂ ಸಾರಿಗೆ ಮತ್ತು ರಾಹೆ ಸಚಿವಾಲಯ ಬೈಪಾಸ್ ಯೋಜನೆ ಕೈಬಿಡುವ ಆದೇಶ ನೀಡಿತ್ತು.
ಬಡವರನ್ನು ಬೀದಿಪಾಲು ಮಾಡುವ ಬೈಪಾಸ್ ಯೋಜನೆಗೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸುಧಾಕರ ಫಲಿಮಾರು, ರವಿ ಫಲಿಮಾರು, ಉಮಾನಾಥ ಪಡುಬಿದ್ರಿ ಮುಂತಾದವರಿದ್ದರು.