ಸರ್ಕಾರಿ ಆಸ್ತಿ ಅತಿಕ್ರಮಣ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ
ಮಣಿಪಾಲ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಹಾಗೂ ಆಸ್ತಿಅತಿಕ್ರಮಣ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್ ಎಚ್ಚರಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಭೂಮಿ, ಕೆರೆ, ನದಿ ಇವು ಸರ್ಕಾರದ ಆಸ್ತಿಯಾಗಿದ್ದು, ಇವುಗಳನ್ನು ಅತಿಕ್ರಮಿಸುವುದು ಹಾಗೂ ಇವುಗಳಿಗೆ ನಷ್ಟ ಉಂಟುಮಾಡುವವರ ವಿರುದ್ಧ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ, ಇತ್ತೀಚೆಗೆ ಹೆಂಗವಳ್ಳಿಯಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ರೆಸಾರ್ಟ್ ಮುಂತಾದವನ್ನು ನಿರ್ಮಿಸಿರುವುದನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಈ ಒತ್ತುವರಿ ಕಾರ್ಯಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಅದೇ ವ್ಯಕ್ತಿಯಿಂದ ವಸೂಲಿ ಮಾಡುವಂತೆ ಹಾಗೂ ಒತ್ತುವರಿ ಪ್ರದೇಶದ ಸ್ಥಳ ಪರಿಶೀಲನೆ ಕುರಿತು ವಿಡಿಯೋ ಚಿತ್ರೀಕರಣ ನಡೆಸುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಉಪ ವಿಭಾಗಾಧಿಕಾರಿ ಯೋಗೇಶ್ವರ್, ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್, ಕಾರ್ಕಳ ತಹಸೀಲ್ದಾರ್ ಬಾಬು ದೇವಾಡಿಗ, ಬ್ರಹ್ಮಾವರ ವಿಶೇಷ ತಹಸೀಲ್ದಾರ್ ಮಾಣಿಕ್ಯ ಇದ್ದರು.