ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರೆಂಜಾಳ: ಅಕ್ರಮ ಕಲ್ಲುಕ್ವಾರಿ ನಿಲ್ಲಿಸಲು ಗ್ರಾಮಸ್ಥರ ಆಗ್ರಹ

Rashmi Kasaragodu
Updated On : 27 Jun 2014, 12:58 pm

ಕಾರ್ಕಳ: ಇಲ್ಲಿನ ರೆಂಜಾಳದಲ್ಲಿ ಸ್ಥಳೀಯಾಡಳಿತದ ಪರವಾನಗಿ ಇಲ್ಲದೇ ಅಕ್ರಮವಾಗಿ ಬೆಂಗಳೂರು ಮೂಲದ ಆರ್.ಎಂ.ಸಿ. ಕಲ್ಲು ಕ್ವಾರಿ ಕಾರ್ಯನಿರ್ವಹಿಸುತ್ತಿದ್ದು ಇದನ್ನು ಕೂಡಲೇ ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರೆಂಜಾಳ ಪರಿಸರದಲ್ಲಿ ಕಳೆದ ಐದು ವರ್ಷಗಳಿಂದ ವಿಶಾಲ ಭೂಮಿಯಲ್ಲಿ ಕ್ರಶರ್ ನಡೆಯುತ್ತಿದೆ. ಕ್ರಶರ್ ಆರ್ಭಟದಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  
ಕ್ರಶರ್‌ಗೆ ಸೇರಿದ 23ಕ್ಕೂ ಹೆಚ್ಚು ಟಿಪ್ಪರ್‌ಗಳ ಸಂಚಾರದಿಂದ ಕಾರ್ಕಳಕ್ಕೆ ಸಂಪರ್ಕ ಕೊಂಡಿಯಾಗಿರುವ ರೆಂಜಾಳ- ಜೋಡುಕಟ್ಟೆ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿ ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ. ಈ ಮಾರ್ಗವಾಗಿ 20ಕ್ಕೂ ಹೆಚ್ಚು ಬಸ್‌ಗಳಿದ್ದವು. ಆದರೆ, ಈಗ ರಸ್ತೆ ಅವ್ಯವಸ್ಥೆಯಿಂದ ಕೆಲವೇ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ನಿತ್ಯ ಪ್ರಯಾಣಿಕರು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕ್ರಶರ್‌ನಿಂದಾಗುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಕೆಲ ತಿಂಗಳು ಕ್ರಶರ್ ಸ್ಥಗಿತಗೊಂಡಿತ್ತು. ಆದರೆ, ಇತ್ತೀಚೆಗೆ ಮತ್ತೇ ಕಾರ್ಯ ನಿರ್ವಹಿಸುತ್ತಿದೆ. ಕ್ರಶರ್‌ನಲ್ಲಿ ಸ್ಫೋಟಕ ಬಳಸುತ್ತಿರುವುದ್ದರಿಂದ ಮನೆಗಳು ಬಿರುಕು ಬಿಟ್ಟಿದ್ದಲ್ಲದೆ ಕೆಲವರಿಗೆ ಆನಾರೋಗ್ಯವು ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೃಷಿ ಭೂಮಿ ಮಾರಾಟ: ಕ್ರಶರ್‌ನ ಬದಿಯಲ್ಲಿ ಹಾಕಲಾದ ಜಲ್ಲಿ ಹುಡಿಯು ಕೃಷಿ ಭೂಮಿಗೆ ಹರಿದು ಕೃಷಿ ಭೂಮಿ ಬಂಜರು ಭೂಮಿಯಾಗಿದೆ. ಕೃಷಿಯನ್ನೇ ನಂಬಿದ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಕೆಲವರು ಕೃಷಿಕರು ಬಂಜರು ಭೂಮಿಯಲ್ಲಿ ಬೆಳೆ ತೆಗೆಯಲಾಗದೆ ಕಡಿಮೆ ಬೆಲೆಗೆ ಕ್ರಶರ್ ಮಾಲೀಕರಿಗೆ ಜಾಗ ಮಾರಾಟ ಮಾಡಿದ್ದಾರೆ.
ಅಲ್ಲದೇ ಕ್ರಶರ್ ಹುಡಿ ಹೊಲ-ಗದ್ದೆಗಳಿಗೆ ಹರಡಿರುವುದರಿಂದ ಇಲ್ಲಿ ಮೇಯುವ ದನಗಳಲ್ಲಿ ಬಂಜೆತನ ಉಂಟಾಗುತ್ತಿದೆ. ಸ್ಫೋಟಕಗಳ ಶಬ್ದದಿಂದ ವಿದ್ಯಾರ್ಥಿಗಳ ಕಲಿಕೆಗೂ ಸಮಸ್ಯೆಯಾಗಿದೆ.
ಉಗ್ರ ಪ್ರತಿಭಟನೆ ಎಚ್ಚರಿಕೆ: ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಕ್ರಶರ್ ಕಾರ್ಯನಿರ್ವಹಿಸುತ್ತಿದೆ. ಕ್ರಶರ್ ನಿಲ್ಲಿಸುವಂತೆ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡಿದರೂ, ರಾಜಕೀಯ ಮೇಲಾಟದಿಂದ ಕ್ರಶರ್‌ನ ಭೀತಿಯಿಂದ ಸಂಚರಿಸುತ್ತಿದೆ. ಹಾಗಾದರೆ ಗ್ರಾ.ಪಂ. ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ರೆಂಜಾಳ ಗ್ರಾ.ಪಂ. ಸದಸ್ಯ ರಮೇಶ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಹಲವು ಮಂದಿ ಗ್ರಾಮಸ್ಥರು ಸೇರಿ ಕೂಡಲೇ ಈ ಕ್ರಶರ್ ನಿಲ್ಲಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮನೆ ಮಾರಿ ಹೋಗಿ ಎಂದಿದ್ದ ಜಿಲ್ಲಾಧಿಕಾರಿ: ಗ್ರಾಮಸ್ಥರ ಸಮಸ್ಯೆ ಪರಿಶೀಲನೆ ಮಾಡಲು ಬಂದ ಜಿಲ್ಲಾಧಿಕಾರಿಯವರು ಜನರ ಸಮಸ್ಯೆಗೆ ಪರಿಹಾರ ನೀಡುವ ಬದಲು ಕ್ರಶರ್‌ನಿಂದ ತೊಂದರೆ ಆದಲ್ಲಿ ಮನೆ ಮಾರಿ ಹೋಗಿ ಎಂದು ಹೇಳಿದ್ದಾರೆ ಎಂದ ಗ್ರಾಮಸ್ಥರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement