ಶಾಸಕರಿಂದ ಸ್ವಾರ್ಥ ರಾಜಕಾರಣ: ಬ್ಲಾಕ್ ಕಾಂಗ್ರೆಸ್ ಟೀಕೆ
ಕಾರ್ಕಳ: ತಾಲೂಕು ಕಚೇರಿ ಬಳಿಯ ನಕ್ರೆ ಜಂಕ್ಷನ್‌ನಲ್ಲಿರುವ ರಿಕ್ಷಾ ನಿಲ್ದಾಣವನ್ನು ಮೂರು ಭಾವಚಿತ್ರದೊಂದಿಗೆ ಉದ್ಘಾಟಿಸುವ ಮೂಲಕ ಇದು ತನ್ನ ಸಾಧನೆ ಎಂದು ಬಿಂಬಿಸುವುದು ಬಿಜೆಪಿಯ ಸ್ವಾರ್ಥ ರಾಜಕಾರಣಕ್ಕೊಂದು ಸಾಕ್ಷಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಟೀಕಿಸಿದೆ. ಹಿಂದೆ ಇಲ್ಲಿ ಇಕ್ಕಟ್ಟಾದ ವೃತ್ತದ ಬದಿಯ ರಿಕ್ಷಾ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಲಕ್ಷ ವಿನಿಯೋಗಿಸಿ, ವನ್ಯಜೀವಿ ಇಲಾಖೆ ಬಳಿಯ ಖಾಲಿ ಜಾಗವನ್ನು ಅಗಲಗೊಳಿಸಿ ಆ ಜಾಗಕ್ಕೆ ಜಲ್ಲಿ ಹಾಕಿ ಮೆಟ್ಲಿಂಗ್ ಮಾಡಲಾಗಿತ್ತು. ಆ ಬಳಿಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅನುದಾನದಡಿಯಲ್ಲಿ ಮಾಜಿ ಶಾಸಕರ ಅವಧಿಯಲ್ಲಿ ಕಾರ್ಯಾದೇಶಗೊಂಡಿದ್ದ ಕಾರ್ಕಳ- ಸೋಮೇಶ್ವರ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಸಂಬಂಧಿತ ಇಲಾಖಾಧಿಕಾರಿಗಳ ಸಾಂದರ್ಭಿಕ ವಿವೇಚನಾ ವೆಚ್ಚದಡಿಯಲ್ಲಿ ಸದರಿ ವಿಸ್ತೃತ ಜಾಗವನ್ನು ಡಾಮರೀಕರಣಗೊಳಿಸಲಾಗಿತ್ತು. ಈಗ ಹಾಲಿ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 1.50 ಲಕ್ಷ ವಿನಿಯೋಗಿಸಿ, ಸದರಿ ಸ್ಥಳದಲ್ಲಿರುವ ರಿಕ್ಷಾ ನಿಲ್ದಾಣಕ್ಕೆ ಶೆಲ್ಟರ್ ನಿರ್ಮಿಸಿ ಇಡೀ ರಿಕ್ಷಾ ನಿಲ್ದಾಣ ತಾನೇ ಅಭಿವೃದ್ಧಿಪಡಿಸಿದ್ದು ಎಂದು ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಪ್ರಚಾರಗಿಟ್ಟಿಸಿಕೊಳ್ಳುವುದು ಎಷ್ಟು ಸರಿ ಎಂದು ಬ್ಲಾಕ್ ಕಾಂಗ್ರೆಸ್ ಪ್ರಕಟಣೆಯಲ್ಲಿ ಟೀಕಿಸಿದೆ.