ಶಿರ್ವ: ಕಲಿಕಾ ಸಾಮಗ್ರಿ ವಿತರಣೆ
ಉಡುಪಿ: ಶಿರ್ವ ಹಿಂದೂ ಹಿ.ಪ್ರಾ. ಶಾಲೆಯ 120 ವಿದ್ಯಾರ್ಥಿಗಳಿಗೆ ಅಂದಾಜು 40 ಸಾವಿರ ಮೌಲ್ಯದ ಸ್ಕೂಲ್ ಬ್ಯಾಗ್, ನೋಟ್‌ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಬೆಂಗಳೂರಿನ ಡೆಲ್ ಕಂಪೆನಿ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯ ಮೂಲಕ ಇತ್ತೀಚಿಗೆ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಜಗದೀಶ ಅರಸ್ ವಹಿಸಿದ್ದರು. ಮುಖ್ಯ ಶಿಕ್ಷಕಿ ಲಿಲ್ಲಿ ನಜ್ರೆತ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ವಸಂತಿ, ಶಾಲಿನಿ ಶೆಟ್ಟಿ, ವಿದ್ಯಾರ್ಥಿಗಳ ಪೋಷಕರು ಇದ್ದರು. ಶಿಕ್ಷಕ ಪ್ರಭಾಕರ ಎನ್. ನಿರೂಪಿಸಿ, ವಂದಿಸಿದರು.
'ಪುನರ್ವಸು' ಮಾಸಪತ್ರಿಕೆ ಅನಾವರಣ
ಉಡುಪಿ: ಪತ್ರಿಕೆಗಳು ಇರುವುದು ಜನರಿಗೆ ವಿವಿಧ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕೆ, ಆದ್ದರಿಂದ ಅದರಲ್ಲೂ ನಿಯತಕಾಲಿಕೆಗಳು ಉತ್ತಮ ಬರಹದಿಂದ ಜ್ಞಾನಾರ್ಜನೆಯೊಂದಿಗೆ ಜೀವನದಲ್ಲಿ ಮೌಲ್ಯಗಳನ್ನು ಪ್ರೇರೇಪಿಸಬೇಕು ಎಂದು ಉದ್ಯಮಿ ಸುಂದರ ಕೆ. ಪುತ್ರನ್ ಹೇಳಿದರು.
ಅವರು ನಗರದ ಸಾಧನಾ ಸಭಾಂಗಣದಲ್ಲಿ ನಡೆದ ಕೊಡಂಕೂರು ದೇವರಾಜ ಮೂರ್ತಿ ಅವರ ಸಂಪಾದಕತ್ವದ ಖಾಸಗಿ ಪ್ರಸಾರ ಮಾಸಪತ್ರಿಕೆ 'ಪುನರ್ವಸು'ವನ್ನು ಅನಾವರಣಗೊಳಿಸಿ ಮಾತನಾಡಿದರು.
ಸಾಧನಾ ಸಂಸ್ಥೆಯ ಆಡಳಿತ ನಿರ್ದೇಶಕ ಉದಯ ಕುಮಾರ್, ಉಮೇಶ್ ಕುಮಾರ್, ಭಾಸ್ಕರ ಶೆಟ್ಟಿ, ಪತ್ರಿಕೆಯ ಮಾರ್ಗದರ್ಶಕರಾದ ನಿರ್ಮಲ ಎಚ್, ಪುಟ ವಿನ್ಯಾಸಕ ಅಭಿಷೇಕ್ ಕೆ. ಉಪಸ್ಥಿತರಿದ್ದರು. ಸಂಪಾದಕ ಕೊಡಂಕೂರು ದೇವರಾಜ ಮೂರ್ತಿ ಸ್ವಾಗತಿಸಿದರು. ಪ್ರತಿನಿಧಿ ಹಾಗೂ ಅಕ್ಷರ ಜೋಡಣೆಗಾರ ಅಖಿಲೇಶ್ ಕೆ. ವಂದಿಸಿದರು.