ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜಿಲ್ಲಾ ಕಸಾಪದಿಂದ ಕವಿಗೋಷ್ಠಿ

Mainashree
Updated On : 5 Mar 2014, 10:08 am

ಉಡುಪಿ: ಯುಗಾದಿ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳೂ ಸೇರಿದಂತೆ 35 ವರ್ಷ ವಯಸ್ಸಿನೊಳಗಿನವರು ಈ ಕವಿಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ತಮ್ಮ ಇತ್ತೀಚಿನ ಎರಡು ಕವನಗಳನ್ನು ಮಾ.20ರೊಳಗೆ ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು, ಕ.ಸಾ.ಪ. ಉಡುಪಿ ಜಿಲ್ಲೆ, 'ಸುಜ್ಞಾನ' ಮಣೂರು, ಕೋಟ- 576221. ಅಥವಾ ರಂಗಪ್ಪಯ್ಯ ಹೊಳ್ಳ, ಕಾರ್ಯದರ್ಶಗಳು, ಕ.ಸಾ.ಪ. ಉಡುಪಿ ಜಿಲ್ಲೆ, ಚಿತ್ರಪಾಡಿ, ಸಾಲಿಗ್ರಾಮ ಇಲ್ಲಿಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ - 9242139645 ಅಥವಾ 9448547658ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

9ರಂದು ರೇಖಿ ಚಿಕಿತ್ಸಾ ಶಿಬಿರ
ಉಡುಪಿ: ಡಿವೈನ್ ಹೀಲಿಂಗ್ ಫೌಂಡೇಶನ್ ಶೃಂಗೇರಿ ಇದರ ವತಿಯಿಂದ ಮಾ.9ರಂದು ಅಂಬಲಪಾಡಿಯ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ರೇಖಿ ಮತ್ತು ಆಧ್ಯಾತ್ಮಿಕ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿಬಿರವನ್ನು ಶಿವಮೊಗ್ಗದ  ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವರಾಮ ಶೆಟ್ಟಿಗೆ ಸನ್ಮಾನ
ಉಡುಪಿ: ಉಡುಪಿ ಯಕ್ಷಗಾನ ಕಲಾರಂಗ, ರಂಗಭೂಮಿ ಸಂಸ್ಥೆಗಳ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ದಿಲ್ಲಿಯಲ್ಲಿ ಏ. 5 ಮತ್ತು 6 ರಂದು ನಡೆಯಲಿರುವ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು ಎಂದು ಸಮ್ಮೇಳನದ ಸಂಚಾಲಕ ಎಮ್.ಬಿ. ಸಾಮಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿನ್ನದ ಪ್ರಭಾವಳಿ ಇಂದು ಅರ್ಪಣೆ
ಉಡುಪಿ: ಇಲ್ಲಿನ ಕೊಡವೂರಿನ ಶ್ರೀ ಶಂಕರನಾರಾಯಣ ದೇವಳದ ಜೀರ್ಣೋದ್ಧಾರದ ಅಂಗವಾಗಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಶ್ರೀ ದೇವರ ಬಲಿಮೂರ್ತಿಗೆ ಚಿನ್ನದ ಅಟ್ಟೆ ಪ್ರಭಾವಳಿ ಹಾಗೂ ಗುಡಿಗೆ ಚಿನ್ನದ ಮುಗುಳಿ (ಶಿಖರ)ಯನ್ನು ಸಮರ್ಪಿಸಲಾಗುತ್ತಿದೆ. ಸುಮಾರು ರು. 11.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಪ್ರಭಾವಳಿಯನ್ನು 5ರಂದು ಸಂಜೆ ಗಂಟೆ 5 ಗಂಟೆಗೆ ಮಲ್ಪೆಯ ಅಯ್ಯಪ್ಪ ಮಂದಿರದಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರಲಾಗುವುದು ಮತ್ತು ನಂತರ ನಡೆಯುವ ಧಾರ್ಮಿಕ - ಸಭಾ ಕಾರ್ಯಕ್ರಮದಲ್ಲಿ ಶ್ರೀದೇವರಿಗೆ ಅರ್ಪಿಸಲಾಗುವುದು ಎಂದು ಶ್ರೀದೇವಳದ ಆಡಳಿತ ಮುಕ್ತೇಸರ ಟಿ. ರಾಘವೇಂದ್ರ ರಾವ್ ಪ್ರಕಟಣೆ ತಿಳಿಸಿದೆ.

'ಗಿರಿಬಳಗ' ರಜತೋತ್ಸವ ಸಂಪನ್ನ
ಕಟಪಾಡಿ: ಇಲ್ಲಿನ ಪಾಜಕ ಕ್ಷೇತ್ರದ ಕುಂಜಾರುಗಿರಿಯ ಗಿರಿಬಳಗದ ರಜತೋತ್ಸವ ಸಮಾರಂಭವನ್ನು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭ ಗಿರಿಬಳಗದ ಸ್ಥಾಪಕ ಅಧ್ಯಕ್ಷ ಗೋವಿಂದ ಭಟ್ ಅವರನ್ನು ಸನ್ಮಾನಿಸಲಾಯಿತು. ಬೆಳ್ಳಿಹಬ್ಬದ ಪ್ರಯುಕ್ತ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ (ಚೆಂಡ ವಾದಕ), ಬ್ರಹ್ಮಾವರ ಬಾಲಕೃಷ್ಣ ನಾಯಕ್ (ವೇಷಭೂಷಣ), ಸುಬ್ರಹ್ಮಣ್ಯ ಹೆಬ್ಬಾರ್ (ಭಾಗವತ), ನಾಗರಾಜ ರಾವ್ (ಕೃಷಿಕ), ಮೂಕಾಂಬಿಕ ವಾರಂಬಳ್ಳಿ (ಭಾಗವತಿಕೆ) ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಂ.ಎ. ಇತಿಹಾಸದಲ್ಲಿ ಮೂರನೇ ರ್ಯಾಂಕ್ ಗಳಿಸಿದ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವದಾಸ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.  ಉಡುಪಿ ಯುವಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಂ. ಎಸ್. ವಿಷ್ಣು, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ, ಪ್ರಸಾದ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಭುವನೇಶ್ ಪೂಜಾರಿ ಭಾಗವಹಿಸಿದ್ದರು.
ಪಟ್ಟಾಭಿರಾಮ ಆಚಾರ್ಯ ಸ್ವಾಗತಿಸಿದರು. ಬೆಳ್ಳೆ ಮಧ್ವರಾಜ ಭಟ್ ಮತ್ತು ಕುಂಜಾರು ರಾಘವೇಂದ್ರ ಭಟ್ ನಿರೂಪಿಸಿದರು.  ಬೆಳ್ಳೆ ಗುರುಪ್ರಸಾದ್ ವಂದಿಸಿದರು. ನಂತರ ಗಿರಿಭಗಿನಿಯರಿಂದ ನೃತ್ಯ ವೈವಿಧ್ಯ ಮತ್ತು ಯಕ್ಷಗಾನ ಕಾರ್ಯಕ್ರಮ ನೆರವೇರಿತು.
    
ಮಾಲಿನಿ ಸಾವು ತನಿಖೆ ಆಗ್ರಹ
ಕಾರ್ಕಳ: ನವ ವಿವಾಹಿತೆ, ಶಿರ್ಲಾಲಿನ ಮಾಲಿನಿ ನಿಗೂಢ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಸ್ವಾಭಿಮಾನಿ ವೇದಿಕೆಯು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಇತ್ತೀಚೆಗೆ ಅಜೆಕಾರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬಸ್ ಮಾಲೀಕ, ಆರೋಪಿ ಅಶೋಕ್ ಜೈನ್ ಎಂಬಾತನನ್ನು ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಮಾಲಿನಿ ನಿಗೂಢ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ, ಮಾಲಿನಿ ಸಾವಿನ ತನಿಖೆಯಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೊಂದು ಕೊಲೆ ಎಂದು ಮನೆಮಂದಿಯೆಲ್ಲಾ ದೂರು ನೀಡಿದ್ದರೂ, ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು.
ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು. ಅಜೆಕಾರು ಸ್ವಾಭಿಮಾನಿ ವೇದಿಕೆ ಸದಸ್ಯ ಸತೀಶ್ ಮಟ್ಟುಪಾಡಿ ಮಾತನಾಡಿ, ಆರೋಪಿಯನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳುವ ಅಗತ್ಯತೆ ಇತ್ತು. ಆದರೂ, ಆರೋಪಿಯನ್ನು ಕಸ್ಟಡಿಗೆ ಕೇಳಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

8ರಂದು ಬ್ರಹ್ಮರಥೋತ್ಸವ
ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನ ಇದೀಗ ವೈಭವದ ರಥೋತ್ಸವಕ್ಕೆ ಸಿದ್ಧಗೊಂಡಿದ್ದು, ಮಾ.8ರಂದು ಶ್ರೀದೇವರ ಬ್ರಹ್ಮರಥೋತ್ಸವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ.
  ಮಾ. 4ರಿಂದ ರಥೋತ್ಸವದ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಮಾ.9ರ ತನಕ ಉತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದಲ್ಲಿ ಧ್ವಜಾರೋಹಣ, ಹಗಲು ಉತ್ಸವ, ರಾತ್ರಿ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿದೆ. ಮಾ.7 ರಂದು ಹೂವಿನ ತೇರು, ಮಾ.9ರಂದು ಅವಭೃತ ಉತ್ಸವ, ಧ್ವ ಜಾವರೋಹಣ, ರಾತ್ರಿ ಶ್ರೀದೇವರ ನೀರಾಟ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement