ರಂಗಭೂಮಿಗೆ ಪ್ರಾತಿನಿಧ್ಯ ಕಡಿಮೆ: ಸಂಸದ ಕಳವಳ
ಉಡುಪಿ: ಸಿನಿಮಾ ಕ್ಷೇತ್ರದ ಎದುರು ರಂಗಭೂಮಿಗೆ ಸಿಗುತ್ತಿರುವ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ರಂಗಭೂಮಿಯ ಕಲಾವಿದರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ಅಗತ್ಯ. ನಾಟಕ ರಂಗಭೂಮಿ ಜನಜೀವನದ ಮೇಲೆ ನೇರ ಪರಿಣಾಮ ಬೀರುತ್ತಾ ಸಮಾಜದ ಮೌಲ್ಯ ಕಾಪಾಡುವಲ್ಲಿ ನೆರವಾಗುತ್ತದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಉಡುಪಿ ಭುಜಂಗ ಪಾರ್ಕ್ನ ಬಯಲುರಂಗ ಮಂದಿರದಲ್ಲಿ ಸುಮನಸಾ ಕೊಡವೂರು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ನಗರಸಭೆಯ ಸಹಕಾರದೊಂದಿಗೆ ಹಮ್ಮಿಕೊಂಡ ಪೌರಾಣಿಕ ನಾಟಕೋತ್ಸವ ರಂಗಹಬ್ಬ 2ರ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾಂಚಜನ್ಯ ಮೊಳಗಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದು ಸಮಾರೋಪ ನುಡಿಗಳನ್ನಾಡಿದ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಪರಿಶ್ರಮದಿಂದ ಆಯೋಜಿಸಿದ ಪೌರಾಣಿಕ ನಾಟಕೋತ್ಸವ ಜನರ ಮನಮುಟ್ಟಿದೆ. ಇಂದಿನ ಕಾಲಘಟ್ಟದಲ್ಲಿ ಪುರಾಣದ ಅಗತ್ಯ ವಿಚಾರಗಳನ್ನು ನೆನಪಿಸಿಕೊಟ್ಟು ಅದೇ ಆದರ್ಶಗಳನ್ನು ಆಳವಡಿಸಿಕೊಳ್ಳುವಂತೆ ಮಾಡಿದ ಈ ಪ್ರಯತ್ನ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ರಾಜು ಬಿ. ತೋನ್ಸೆ ಹಾಗೂ ರಂಗ ನಿರ್ದೇಶಕ ಬಾಸುಮ ಕೊಡಗು, ಭಾಸ್ಕರ್ ಪಾಲನ್ ಬಾಚನಬೈಲು ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಅಲೆವೂರು ಶೇಖರ ಪೂಜಾರಿ, ಮಣಿಪಾಲ ಉದಯ ಗ್ರೂಫ್ಸ್ನ ರಮೇಶ್ ಬಂಗೇರ, ಮತ್ಸ್ಯೋದ್ಯಮಿ ಗೋಪಾಲ ಕೆ. ಕುಂದರ್, ಅಧ್ಯಕ್ಷ ಪ್ರವೀಣ್ ಜಿ. ಕೊಡವೂರು ಇದ್ದರು.
ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೊಳಲಗಿರಿ ಸ್ವಾಗತಿಸಿ, ಪ್ರವೀಣ್ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಯಾನಂದ ಕುಮಾರ್ ವಂದಿಸಿದರು.