ಮಾಲಿನಿ ಸಾವು ತನಿಖೆ ಆಗ್ರಹ
ಕಾರ್ಕಳ: ನವ ವಿವಾಹಿತೆ, ಶಿರ್ಲಾಲಿನ ಮಾಲಿನಿ ನಿಗೂಢ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಸ್ವಾಭಿಮಾನಿ ವೇದಿಕೆಯು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಇತ್ತೀಚೆಗೆ ಅಜೆಕಾರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬಸ್ ಮಾಲೀಕ, ಆರೋಪಿ ಅಶೋಕ್ ಜೈನ್ ಎಂಬಾತನನ್ನು ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಮಾಲಿನಿ ನಿಗೂಢ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ, ಮಾಲಿನಿ ಸಾವಿನ ತನಿಖೆಯಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೊಂದು ಕೊಲೆ ಎಂದು ಮನೆಮಂದಿಯೆಲ್ಲಾ ದೂರು ನೀಡಿದ್ದರೂ, ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು.
ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು. ಅಜೆಕಾರು ಸ್ವಾಭಿಮಾನಿ ವೇದಿಕೆ ಸದಸ್ಯ ಸತೀಶ್ ಮಟ್ಟುಪಾಡಿ ಮಾತನಾಡಿ, ಆರೋಪಿಯನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳುವ ಅಗತ್ಯತೆ ಇತ್ತು. ಆದರೂ, ಆರೋಪಿಯನ್ನು ಕಸ್ಟಡಿಗೆ ಕೇಳಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.