ಉಡುಪಿ -ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಡಿ.ರಾಜು
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಕಾರ್ಕಳದ ಯುವ ಮುಖಂಡ, ಉದ್ಯಮಿ ಡಿ. ರಾಜು ಬಹುತೇಕ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ಹಿರಿಯ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ರಾಜು ಸ್ಪರ್ಧೆ ಬಗ್ಗೆ ಚರ್ಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕಟ್ಟ ಅಭಿಮಾನಿಯಾಗಿ, ಅವರ ಮಾರ್ಗದರ್ಶನದಲ್ಲಿ ರಾಜಕಾರಣಕ್ಕೆ ಪ್ರವೇಶಿಸಿರುವ ಡಿ. ರಾಜು ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದು, ಬಿಲ್ಲವ ಮಹಾಮಂಡಲದಲ್ಲಿ ಸಕ್ರಿಯರಾಗಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ಗೀತಾ ಖಚಿತ: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರವನ್ನೊಳಗೊಂಡ ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಟ ಶಿವರಾಜ್‌ಕುಮಾರ್ ಪತ್ನಿ, ದಿ. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಯಾಗುವುದು ಖಚಿತವಾಗಿದೆ, ಇದರಿಂದ ರಾಜ್ಯದಲ್ಲಿಯೇ ಈ ಬಾರಿಯ ಚುನಾವಣೆಯಿಂದ ಭಾರಿ ಬದಲಾವಣೆಯ ನಿರೀಕ್ಷೆ ಇದೆ ಎಂದು ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.