ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ ಅಧಿಕಾರ ಸ್ವೀಕಾರ

Mainashree
Updated On : 7 Mar 2014, 10:43 am

ಮಂಗಳೂರು: 'ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸಮಗ್ರ ಬೆಳವಣಿಗೆ ನನ್ನ ಗುರಿ. ಇದಕ್ಕೆ ಓದುಗರ, ಸಾಹಿತಿಗಳ ಬೆಂಬಲ ಬೇಕು' ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊನಾಲ್ಡ್(ರೊಯ್) ಎಸ್ ಕ್ಯಾಸ್ಟಲಿನೊ ಹೇಳಿದರು.
 ಗುರುವಾರ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
 ಶಾಲೆಗಳಲ್ಲಿ ಕೊಂಕಣಿ ಭಾಷೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಕೊಂಕಣಿ ಲಿಪಿಯಲ್ಲಿ ಗೊಂದಲಗಳಿದ್ದು, ಮೋಹನ್ ಪೈ ಅವರ ನೇತೃತ್ವದಲ್ಲಿ ಲಿಪಿಯ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಧ್ಯಕ್ಷರ ನೇಮಕಾತಿ ಸಂದರ್ಭ ವಿವಿಧ ಕೊಂಕಣಿ ಸಮುದಾಯಕ್ಕೆ ಸೇರಿದ ಪ್ರತಿನಿಧಿಗಳನ್ನು ಏಕಕಾಲಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಅಕಾಡೆಮಿಗೆ ಬಲ ತುಂಬಲಾಗಿದೆ ಎಂದರು.
 ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಕೊಂಕಣಿ ಭಾಷೆಯನ್ನು ಮಕ್ಕಳು ಮಾತನಾಡುವಂತೆ ಪ್ರೇರೆಪಿಸಬೇಕು. ತುಳು, ಬ್ಯಾರಿ ಇನ್ನಿತರ ಭಾಷೆಗಳನ್ನು ಜನರು ಬಿಟ್ಟುಕೊಡುವುದಿಲ್ಲ. ಆಡುಭಾಷೆಯಾಗಿ ಮಾತನಾಡುತ್ತಾರೆ. ಕೊಂಕಣಿಗರು ಹೆಚ್ಚಾಗಿ ಆಂಗ್ಲಭಾಷೆ ಮಾತನಾಡುತ್ತಿರುವ ಪರಿಣಾಮ ಕೊಂಕಣಿ ಭಾಷೆ ಜನಮಾನಸದಲ್ಲಿ ನೆಲೆಯೂರಿಲ್ಲ ಎಂದರು.
 ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಮಾತನಾಡಿ, ರಾಜ್ಯದ 18 ಅಕಾಡೆಮಿಗಳಲ್ಲಿ ಕೊಂಕಣಿ ಅಕಾಡೆಮಿಯು ಅತಿ ಹೆಚ್ಚು ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 3 ಧರ್ಮ 41 ಪಂಗಡಗಳಿರುವ ಕೊಂಕಣಿಗರನ್ನು ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೊಂಕಣಿ ಸಾಹಿತಿ ಎರಿಕ್ ಒಝೊರಿಯೋ, ಮಾಜಿ ಅಧ್ಯಕ್ಷರಾದ ಬಸ್ತಿ ವಾಮನ ಶೆಣೈ, ಡಾ. ನಾರಾಯಣ ಖಾರ್ವಿ ಇದ್ದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರು: ಬಿಜಾಪುರದ ಡಾ. ಅರವಿಂದ ಸಿ ಶ್ಯಾನುಭೋಗ್, ಹೊನ್ನಾವರದ ಅಶೋಕ್ ಕಾಸರಗೋಡು, ಧಾರವಾಡದ ಡಾ. ಚೇತನ ಎಸ್ ನಾಯಕ್, ಉಡುಪಿಯ ಕಮಲಾಕ್ಷ ಶೇಟ್, ಮಂಗಳೂರಿನ ಶೇಖರ ಗೌಡ, ಯಲ್ಲಾಪುರದ ಜಯರಾಮ್ ನಾರಾಯಣ ಸಿದ್ಧಿ, ಉಡುಪಿ ಎಂ.ಎಂ. ಮೀರನ್, ಮೈಸೂರಿನ ಮಮತಾ ಕಾಮತ್, ಬಂಟ್ವಾಳ ಡಾ. ವಾರಿಜ ನಿರೇಬೈಲ್, ಬೈಂದೂರಿನ ಯಾಕೂಬ್ ಅಹ್ಮದ್ ಜೀ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement