ತುಳು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗದಿರಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣ: ಅಮೀನ್
ಉಡುಪಿ: ತುಳು ಭಾಷೆ ಇದುವರೆಗೂ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗದಿರಲು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ ಎಂದು ತುಳು ಸಾಹಿತಿ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಎಂಜಿಎಂ ಕಾಲೇಜಿನ ತುಳುಕೂಟದ ವತಿಯಿಂದ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ಜರುಗಿದ ಮಂಗಳೂರು ವಿ.ವಿ. ಅಂತರ್ಕಾಲೇಜು ತುಳು ಸಾಂಸ್ಕೃತಿಕ ಜಾನಪದ ಸ್ಪರ್ಧೆ 'ತುಳನಾಡ್ದ ವೈಭವ- 2014' ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯತ್ತ ದಾಪುಗಾಲು ಇಡುತ್ತಿರುವ ನಾವು ತುಳು ಸಂಸ್ಕೃತಿ, ಆಚಾರ ವಿಚಾರಗಳನ್ನು ಮರೆಯುತ್ತಿದ್ದೇವೆ. ಇವುಗಳನ್ನು ಉಳಿಸಿಕೊಳ್ಳಬೇಕು, ವಿದ್ಯಾರ್ಥಿಗಳು ತುಳು ಸಂಸ್ಕೃತಿಯ ಕುರಿತು ಅಧ್ಯಯನದಲ್ಲಿ ತೊಡಗಿಸಿಕೊಂಡು ಡಾಕ್ಟರೇಟ್ ಪದವಿ ಗಳಿಸುವಂತಾಗಬೇಕು ಎಂದರು.
ಪ್ರಾಂಶುಪಾಲ ಡಾ.ಎನ್. ಹಾಲಾ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಯು. ಲೀಲಾವತಿ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲಿನಿ ದೇವಿ ಇದ್ದರು. ತುಳು ಕೂಟದ ಸಂಚಾಲಕ ಡಾ. ವಸಂತ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಸೂರಜ್ ಸ್ವಾಗತಿಸಿದರು. ಅಕ್ಷತ್ಕುಮಾರ್ ನಿರೂಪಿಸಿದರು. ಉಪನ್ಯಾಸಕಿ ಮಮತಾ ವಂದಿಸಿದರು. ಉಡುಪಿ ಪ್ರಾದೇಶಿಕ ಜಾನಪದ ಕಲೆಗಳ ಸಂಪನ್ಮೂಲ ಕೇಂದ್ರದ ಸಂಶೋಧಕ ಡಾ. ಅಶೋಕ್ ಆಳ್ವ ಅವರ 'ಒಂಜಿ ಕುಂದು ನಲ್ಪ ಕತೆಕುಲು' ಹಾಗೂ ಲೇಖಕ ದೇವೇಂದ್ರ ಪೆಜತ್ತಾಯ ಅವರ 'ಕನಕೋಪನಿಷತ್' ತುಳು ಕೃತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮವಾರ ಬಿಡುಗಡೆಗೊಳಿಸಿದರು.