ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 16ರವರೆಗೆ ಅವಕಾಶ: ಜಿಲ್ಲಾಧಿಕಾರಿ
ಮಣಿಪಾಲ: ಮತದಾರರ ಪಟ್ಟಿಗೆ ಇದುವರೆಗೆ ಹೆಸರು ಸೇರಿಸಿರದಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕೆ ಸಾಧ್ಯವಿದ್ದು, ಮಾ.16ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಇದೆ.
ರಾಷ್ಟ್ರೀಯ ಚುನಾವಣಾ ಆಯೋಗ ಈ ವಿಶೇಷ ಅವಕಾಶ ನೀಡಿದ್ದು, ಮಾ.9ರಂದು ಎಲ್ಲ ಮತಗಟ್ಟೆಗಳಲ್ಲಿ ಆಯಾ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ.
ಈ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಲ್ಲಿಯೇ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ತಾಲೂಕು ಕಚೇರಿಯಲ್ಲಿಯೂ ಮಾ.16ರೊಳಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದಾಗಿದೆ. ಈ ತಾರೀಕಿನೊಳಗೆ ಹೆಸರು ಸೇರಿಸಿದವರಿಗೆ ಎಪಿಕ್ ಕಾರ್ಡ್(ಮತದಾರರ ಗುರುತು ಚೀಟಿಯನ್ನು) ನೀಡಲಾಗುವುದು. ಅದನ್ನು ಬಳಸಿಕೊಂಡು ಮತದಾನ ಮಾಡಬಹುದು.
ಈ ಬಗ್ಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮತ್ತು ಮತದಾನ ಮಾಡುವ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನೇ ಕ್ಯಾಂಪಸ್ ಅಂಬಾಸಿಡರ್ಗಳಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲೆಯ 20 ಕಾಲೇಜುಗಳ 27 ಮಂದಿ ಸ್ವಯಂ ಆಸಕ್ತ ವಿದ್ಯಾರ್ಥಿಗಳನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
13 ಲಕ್ಷ ಮತದಾರರು: ಈ ಲೋಕಸಭಾ ಕ್ಷೇತ್ರದಲ್ಲಿ ಜ.31ರವರೆಗೆ 13,51,245 ಮತದಾರರಿದ್ದಾರೆ. ಅವರಲ್ಲಿ ಈ ಹಿಂದಿನಂತೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚು, ಅಂದರೆ 6,89,833 ಮಹಿಳಾ ಮತದಾರರು ಮತ್ತು 6,61,364 ಪುರುಷ ಮತದಾರರಿದ್ದಾರೆ.
ಉಡುಪಿ ವ್ಯಾಪ್ತಿಯಲ್ಲಿ 6,95,969 (ಮಹಿಳಾ ಮತದಾರರು - 3,65,592, ಪುರುಷ ಮತದಾರರು - 3,30,355), ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 6,55,276 (ಮಹಿಳಾ ಮತದಾರರು - 3,24,241, ಪುರುಷ ಮತದಾರರು - 3,31,009) ಮತದಾರರಿದ್ದಾರೆ.
1751 ಮತಗಟ್ಟೆಗಳು: ಉಡುಪಿ- ಚಿಕ್ಕಮಗಳೂರು ಬೃಹತ್ ಲೋಕಸಭಾ ಕ್ಷೇತ್ರವಾಗಿದ್ದು ಇಲ್ಲಿ ಒಟ್ಟು 1,751 ಮತಗಟ್ಟೆಗಳಿವೆ. ಅದರಲ್ಲಿ ಉಡುಪಿ ವ್ಯಾಪ್ತಿಯಲ್ಲಿ 819 ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 932 ಮತಗಟ್ಟೆಗಳಿವೆ.
ಇವರಲ್ಲಿ ಈಗಾಗಲೇ ಹೆಚ್ಚಿನ ಎಲ್ಲ ಮತದಾರರಿಗೆ (ಶೇ 99.98ರಷ್ಟು) ಎಪಿಕ್ ಕಾರ್ಡ್ (ಮತದಾರರ ಗುರುತು ಚೀಟಿ)ಯನ್ನು ವಿತರಿಸಲಾಗಿದೆ. ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಚುನಾವಣೆಯ ದಿನಕ್ಕೆ ಮೊದಲು ಮತದಾರರ ಚೀಟಿಯನ್ನು ಸರ್ಕಾರವೇ ಉಚಿತವಾಗಿ ವಿತರಿಸಲಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ
ಮಾ.19- ಚುನಾವಣಾ ಅಧಿಸೂಚನೆ ಪ್ರಕಟ, ಮಾ.19ರಿಂದ 26- ನಾಮಪತ್ರ ಸಲ್ಲಿಕೆ, ಮಾ. 27- ನಾಮಪತ್ರ ಪರಿಶೀಲನೆ, ಮಾ.29- ಉಮೇದುವಾರಿಕೆ ಹಿಂದಕ್ಕೆ, ಏ.17- ಮತದಾನ, ಮೇ 16- ಮತ ಎಣಿಕೆ.
ಇಲ್ಲಿಗೆ ಕರೆ ಮಾಡಿ
ಚುನಾವಣೆಗಾಗಿ ಜಿಲ್ಲಾ ಚುನಾವಣಾ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಇಲ್ಲಿಗೆ ಕರೆ ಮಾಡಬಹುದು. ಜಿಲ್ಲಾಧಿಕಾರಿ ಕಚೇರಿ - 1077, ಉಡುಪಿ ತಹಸೀಲ್ದಾರ್ ಕಚೇರಿ- 2521198, ಕುಂದಾಪುರ ತಹಸೀಲ್ದಾರ್ ಕಚೇರಿ- 0824 235567, ಕಾರ್ಕಳ ತಹಸೀಲ್ದಾರ್ ಕಚೇರಿ- 08258 230201.