ಗೋಬರ್ ಅನಿಲ ಸ್ಥಾವರ ರಚನೆ ಮಾಹಿತಿ ಕಾರ್ಯಕ್ರಮ
ಉಡುಪಿ: ಜಿಲ್ಲಾ ಕೃಷಿ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಇಲ್ಲಿನ ಕುಕ್ಕೆಹಳ್ಳಿಯ ಪ್ರಕಾಶ ಹೆಬ್ಬಾರ ಅವರ ಮನೆಯಲ್ಲಿ ವಿವಿಧ ಸಾವಯವ ಘಟಕಗಳಿಗೆ ಅನುದಾನ ವಿತರಣೆ ಹಾಗೂ ಗೋಬರ್ ಅನಿಲ ಸ್ಥಾವರ ರಚನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ವಿಜಯಕುಮಾರ ನಾಗನಾಳ ಅವರು ಉದ್ಘಾಟಿಸಿ, ರೈತರು ಸ್ವಾವಲಂಬಿಗಳಾಗಬೇಕು ಮತ್ತು ತಮಗೆ ಬೇಕಾದ ಆಹಾರ ಉತ್ಪನ್ನಗಳನ್ನು ತಾವೇ ಉತ್ಪಾದಿಸಿಕೊಳ್ಳಬೇಕು, ಇದರಿಂದ ತಮ್ಮ ಆರ್ಥಿಕ ಮತ್ತು ಆರೋಗ್ಯದ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿ ಸತ್ಯೇಂದ್ರ ಪೈ ಗೋಬರ್ ಅನಿಲ ಸ್ಥಾವರಗಳ ಬಗ್ಗೆ ಮಾಹಿತಿ ನೀಡಿದರು. ಕುಕ್ಕೆಹಳ್ಳಿ ಗ್ರಾಪಂ ಸದಸ್ಯ ಸೂರ್ಯ ಕುಲಾಲ ಉಪಸ್ಥಿತರಿದ್ದರು. ಯೋಜನೆಯ ಹೈನುಗಾರಿಕಾಧಿಕಾರಿ ಸುರೇಶ್ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಕೃಷಿ ಅಧಿಕಾರಿ ನಾರಾಯಣ ಜಿ. ಕಾರ್ಯಕ್ರಮ ನಿರೂಪಿಸಿ ಕುಕ್ಕೆಹಳ್ಳಿ ಸೇವಾಪ್ರತಿನಿಧಿಯವರಾದ ರಮೇಶರವರು ಸ್ವಾಗತಿಸಿದರು. ಸೇವಾಪ್ರತಿನಿಧಿ ಸುಧಾಕರರವರು ವಂದಿಸಿದರು. ವಿವಿಧ ಘಟಕಗಳನ್ನು ರಚಿಸಿದ ಫಲಾನುಭವಿಗಳಿಗೆ ರು. 1.16 ಲಕ್ಷ ಅನುದಾನ ವಿತರಿಸಲಾಯಿತು.