ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿಧಿ ಆಸೆಗಾಗಿ ಒಂದು ದಿನದ ಹಸುಳೆ ಬಲಿಗೆ ಯತ್ನ

Rashmi Kasaragodu
Updated On : 13 Mar 2014, 12:18 pm

 ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ, ಗಂಗಾವತಿ, ಮಾ.12
ಆಧುನಿಕ ಯುಗದಲ್ಲೂ ಮೂಢನಂಬಿಕೆ ಅಳಿಸಿಲ್ಲ. ಅದಕ್ಕೆ ಜ್ವಲಂತ ನಿದರ್ಶನ ಎನ್ನುವಂತೆ ಗಂಗಾವತಿ ನಗರದ ಮಧ್ಯಭಾಗದಲ್ಲಿರುವ ರುದ್ರಭೂಮಿಯಲ್ಲಿ ಒಂದು ದಿನದ ಹೆಣ್ಣು ಶಿಶುವೊಂದನ್ನು ನಿಧಿ ಆಸೆಗಾಗಿ ಬಲಿ ಕೊಡಲು ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಅಜ್ಜಿಯೊಬ್ಬಳು ಸಕಾಲಕ್ಕೆ ಆಗಮಿಸಿದ್ದರಿಂದ ದುಷ್ಕರ್ಮಿಗಳು ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಆರು ಬೆರಳಿರುವ ಮಗುವನ್ನು ಬಲಿ ಕೊಟ್ಟರೆ ತಮ್ಮ ಕಾರ್ಯ ಸಿದ್ಧಿಸುತ್ತದೆ ಎಂಬುದು ವಾಮಾಚಾರಿಗಳ ನಂಬಿಕೆ. ಹೀಗಾಗಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಲ್ಲಿನ ರುದ್ರಭೂಮಿಯಲ್ಲಿ ನಾಲ್ಕೈದು ಜನರು ಗುಂಡಿ ತೋಡಿ, ವಾಮಾಚಾರದ ವಸ್ತುಗಳೊಂದಿಗೆ ಅದೇ ತಾನೇ ಜನಿಸಿದ 6 ಬೆರಳುಗಳುಳ್ಳ ಹೆಣ್ಣು ಶಿಶುವನ್ನು ಜೀವಂತ ಹೂಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಕಟ್ಟಿಗೆ ಆರಿಸಲೆಂದು ಅಲ್ಲಿಗೆ ಬಂದಿದ್ದ ವೃದ್ಧೆ ಶಾಂತಮ್ಮ ಈ ವ್ಯಕ್ತಿಗಳ ನಡವಳಿಕೆ ಬಗ್ಗೆ ಅನುಮಾನ ಬಂದಿದೆ. ಅಜ್ಜಿಯನ್ನು ನೋಡಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣ ಗುಂಡಿಯ ಬಳಿಗೆ ಹೋದ ಅಜ್ಜಿ ಅಳುತ್ತಿರುವ ಶಿಶುವನ್ನು ನೋಡಿದ್ದಾರೆ. ಗುಂಡಿಯ ಸುತ್ತಲೂ ತೆಂಗಿನಕಾಯಿ, ಬಳೆ, ನಿಂಬೆಹಣ್ಣು, ಕುಂಕುಮ ಇತ್ಯಾದಿಗಳನ್ನು ಹಾಕಿದ್ದರಿಂದ ವಾಮಾಚಾರಕ್ಕೆ ಈ ಮಗುವಿನ ಬಲಿ ನೀಡಲು ಸಿದ್ಧತೆ ನಡೆಸಿರುವುದು ಅವರಿಗೆ ಸ್ಪಷ್ಟವಾಗಿದೆ. ತಕ್ಷಣ ಶಿಶು ಮೇಲೆ ದಾಳಿ ನಡೆಸಲು ಕಾಯುತ್ತಿದ್ದ ನಾಯಿ, ಹಂದಿಗಳನ್ನು ಓಡಿಸಿ, ಅಜ್ಜಿ ಮಗುವನ್ನು ತನ್ನ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಗುಡಿಸಲಿಗೆ ಕರೆ ತಂದಿದ್ದಾಳೆ. ಆದರೆ, ಈ ಮಗು ಯಾರಿಗೆ ಸೇರಿದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ದುಷ್ಕರ್ಮಿಗಳು ಮಗುವನ್ನು ಎಲ್ಲಿಂದ ತಂದಿದ್ದಾರೆ ಎಂಬುದು ಕೂಡ ಗೊತ್ತಾಗಿಲ್ಲ.
ಗುಡಿಸಲಿನಲ್ಲಿ ಪಾಲನೆ: ಗಂಗಾವತಿಯ ಭಗತ್ ಸಿಂಗ್ ನಗರದಲ್ಲಿರುವ ಶಾಂತಮ್ಮ (60) ತನ್ನ ಗುಡಿಸಲಿನಲ್ಲಿ ತೊಟ್ಟಿಲು ಕಟ್ಟಿ ತೂಗುತ್ತ ಸೊಸೆ ಹುಲಿಗೆಮ್ಮ ಜತೆಗೆ ಈ ಶಿಶುವನ್ನು ಜೋಪಾನ ಮಾಡುತ್ತಿದ್ದಾರೆ. ರಕ್ತ ಸುರಿಯುತ್ತಿದ್ದ ಹೊಕ್ಕುಳ ಹುರಿಯನ್ನು ಕಟ್ಟಿ, ಈಕೆಯೇ ಚಿಕಿತ್ಸೆ ನೀಡಿದ್ದಾರೆ. ಸ್ಮಶಾನದಲ್ಲಿ ಕಟ್ಟಿಗೆ ಆರಿಸಲು ಹೋಗಿದ್ದಾಗ ಕಣ್ಣಿಗೆ ಬಿದ್ದ ಈ ಮಗುವನ್ನು ಯಾರಿಗೂ ಕೊಡುವುದಿಲ್ಲ. ಪಾಪಿಗಳು, ಈ ಕೂಸನ್ನು ಸಾಯಿಸಲು ಮುಂದಾಗಿದ್ದರು ಎಂದು ಹೇಳುವಾಗ ಅವರ ಧ್ವನಿಯಲ್ಲಿ ಆಕ್ರೋಶವಿತ್ತು.
ಈ ಮಧ್ಯೆ ಅಜ್ಜಿಯ ಮನೆಯಿಂದ ಮಗುವನ್ನು ಪೊಲೀಸರು ಬುಧವಾರ ಸಂಜೆ ಗಂಗಾವತಿ ನಗರ ಠಾಣೆಗೆ ಕರೆತಂದಿದ್ದರು. ಪೊಲೀಸರ ಕಾಲಿಗೆ ಬಿದ್ದ ಅಜ್ಜಿ, ಈ ಕೂಸನ್ನು ನನಗೇ ಕೊಡಿ. ಪ್ರೀತಿಯಿಂದ ಸಾಕುತ್ತೇನೆ ಎಂದು ಹೇಳಿ ಮತ್ತೆ ಎತ್ತಿಕೊಂಡು ಹೋಗಿದ್ದಾರೆ
ಮೂರ್ಖರ ಕೆಲಸ: ನಿಧಿ ಮತ್ತು ವಶೀಕರಣಕ್ಕಾಗಿ ಕೆಲವರು ನರ ಬಲಿ ಮತ್ತು ಪ್ರಾಣಿ ಬಲಿ ನೀಡುತ್ತಾರೆ. ಇದು ಮೂರ್ಖರ ಕೆಲಸ. ಆರು ಬೆರಳುಳ್ಳ ಮಗವನ್ನು ಬಲಿ ಕೊಟ್ಟರೆ ನಿಧಿ ಸಿಗುತ್ತದೆ, ಬಿಳಿ ಮಚ್ಚೆ ಇರುವರನ್ನು ಬಲಿ ಕೊಟ್ಟರೆ ಕಾರ್ಯಗಳು ಸಿದ್ಧಿಯಾಗುತ್ತವೆ ಎಂಬ ಮಾತುಗಳನ್ನು ನಂಬಿ ದುಷ್ಕೃತ್ಯಕ್ಕೆ ಇಳಿದರೆ ಅವರಂಥ ಮೂರ್ಖರು ಯಾರೂ ಇಲ್ಲ ಎನ್ನುತ್ತಾರೆ ಶಾಂತಮ್ಮ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement