ಹಫ್ತಾ ವಸೂಲಿ ಸಂಚು: ಭೂಗತ ಪಾತಕಿಗಳ ಮೂವರು ಸಹಚರರ ಸೆರೆ
ಮಂಗಳೂರು: ಹಫ್ತಾ ವಸೂಲಿಗೆ ಸಂಚು ರೂಪಿಸುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಹಾಗೂ ಕಲಿ ಯೋಗೀಶನ ಮೂವರು ಸಹಚರರನ್ನು ಸಿ.ಸಿ.ಬಿ. ಪೊಲೀಸರು ಬುಧವಾರ ನಾಟೆಕಲ್ ಸಮೀಪ ಬಂಧಿಸಿದ್ದಾರೆ.
ಮುಡಿಪುವಿನ ಅಬೂಬಕ್ಕರ್ ಸಿದ್ದಿಕ್ (26), ಕಾರ್ಕಳದ ನಿತಿನ್ (23) ಹಾಗೂ ಸಾಲೆತ್ತೂರಿನ ಗುರುಪ್ರಸನ್ನ (22) ಬಂಧಿತ ಆರೋಪಿಗಳು. ಆರೋಪಿಗಳಿಂದ ಮೋಟಾರ್ ಸೈಕಲ್, ಪಿಸ್ತೂಲಿನ 6 ಸಜೀವ ಮದ್ದುಗುಂಡುಗಳು, 3 ತಲವಾರುಗಳು ಮತ್ತು ಮೆಣಸಿನ ಹುಡಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ವಿವರ: ಬುಧವಾರ ಬೆಳಗ್ಗೆ ಮಂಜನಾಡಿ ಗ್ರಾಮದ ಮಂಜನಾಡಿ ಕ್ಯಾಂಟೀನ್ ಎಂಬಲ್ಲಿ ತೌಡುಗೋಳಿ ಕ್ರಾಸ್‌ನಿಂದ ನಾಟೆಕಲ್ ಕ್ರಾಸ್ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಭೂಗತ ಪಾತಕಿ ರವಿಪೂಜಾರಿ ಹಾಗೂ ಕಲಿಯೋಗೀಶನ ನಾಲ್ವರು ಸಹಚರರು ಒಟ್ಟುಗೂಡಿ ಮಾತನಾಡುತ್ತಿದ್ದು, ಇವರು ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡುವ ಸಂಚು ರೂಪಿಸಿ ಮಾತನಾಡಿಕೊಳ್ಳುತ್ತಿದ್ದ ಖಚಿತ ವರ್ತಮಾನದಂತೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರನ್ನು ಸೆರೆ ಹಿಡಿದಿದ್ದಾರೆ.
ಈ ಆರೋಪಿಗಳು ರವಿಪೂಜಾರಿ ಮತ್ತು ಕಲಿಯೋಗೀಶಗೆ ಮಂಗಳೂರು, ಉಡುಪಿ, ಕಾರ್ಕಳದ ಬಿಲ್ಡಕ್‌ಗಳು ಹಾಗೂ ಶ್ರೀಮಂತ ವ್ಯಕ್ತಿಗಳ ಮೊಬೈಲ್ ನಂಬರ್, ಕಚೇರಿಯ ದೂರವಾಣಿ ನಂಬರ್ ಮತ್ತು ಅವರ ಮನೆ ನಂಬರ್‌ಗಳನ್ನು ನೀಡುತ್ತಿದ್ದರು. ಅಲ್ಲದೆ, ಅವರ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿ.ಸಿ.ಬಿ ಘಟಕದ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿ'ಸೋಜ, ಪಿ.ಎಸ್.ಐ. ಶ್ಯಾಮ್ ಸುಂದರ್, ಸಿಬ್ಬಂದಿ ಶಶಿಧರ ಶೆಟ್ಟಿ, ಗಣೇಶ್.ಎಂ.ಪಿ, ಗಣೇಶ್ ಕಲ್ಲಡ್ಕ, ವೇಣುಗೋಪಾಲ, ಚಂದ್ರಶೇಖರ, ದಿನೇಶ್ ಬೇಕಲ್, ಯು.ಜನಾರ್ದನ ಮತ್ತು ತೇಜ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.