ನೀರಿನ ಅಭಾವ ಓಕೆ... ರಾಜಕೀಯ ಯಾಕೆ...?
ಉಡುಪಿ ನಗರದ ಒಂದೆರಡು ವಾರ್ಡ್ಗಳಲ್ಲಿ ನೀರಿನ ಅಭಾವ ಉಂಟಾಗಿದ್ದರೂ, ಇನ್ನೂ ಹಾಹಾಕಾರವಂತೂ ಆರಂಭವಾಗಿಲ್ಲ. ಆದರೆ, ನಗರಸಭೆಯ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಮಧ್ಯೆ ನೀರಿನ ರಾಜಕೀಯ ಮಾತ್ರ ಜೋರಾಗಿಯೇ ಆರಂಭವಾಗಿದೆ. ಇದಕ್ಕೆ ಮುಂಬರುವ ಲೋಕಸಭಾ ಚುನಾವಣೆಯೂ ಕಾರಣವಾಗಿದೆ. ಉಡುಪಿ ನಗರಸಭೆಗೆ ನೀರು ಪೂರೈಸುವ ಸುವರ್ಣ ನದಿಗೆ ಅಡ್ಡಲಾಗಿ ಶಿರೂರು ಮತ್ತು ಬಜೆ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ 2 ಅಣೆಕಟ್ಟುಗಳಲ್ಲಿ ಸದ್ಯಕ್ಕಂತೂ ಸಾಕಷ್ಟು ನೀರಿದೆ. ಈ ನೀರನ್ನು ಮೇ ತಿಂಗಳ ಕೊನೆಯವರೆಗೆ ಅಂದರೆ ಮಳೆಗಾಲ ಆರಂಭವಾಗುವರೆಗೂ ಅತ್ಯಂತ ವ್ಯವಸ್ಥಿತವಾಗಿ ಉಳಿಸಿ ವಿತರಿಸಬೇಕಾಗಿದೆ. ಆದರೆ, ನೀರಿದ್ದರೂ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ವಿನಾಕಾರಣ ಉಡುಪಿ ಜನತೆಯನ್ನು ತೀವ್ರ ನೀರಿನ ಅಭಾವದ ಆತಂಕಕ್ಕೆ ದೂಡುತ್ತಿದ್ದಾರೆ.