ನೀರು ಅಭಾವ- ಬಿಜೆಪಿಯಿಂದ ಅಪಪ್ರಚಾರ: ಯುವರಾಜ್
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಹಿಂದಿನಗಿಂತ ಈ ಬಾರಿ 3000 ಹೆಚ್ಚುವರಿ ನೀರಿನ ಸಂಪರ್ಕಗಳನ್ನು ನೀಡಲಾಗಿದ್ದು, ನೀರು ಬೇಡಿಕೆ ಹೆಚ್ಚಿದೆ. ಆದ್ದರಿಂದ ಈ ಬಾರಿ 7 ದಿನ ಮೊದಲೇ 2 ದಿನಗಳಿಗೊಮ್ಮೆ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ಜನರಿಂದ ನೀರಿನ ಅಭಾವದ ದೂರುಗಳೂ ಬಂದಿಲ್ಲ. ಬಿಜೆಪಿ ಸುಳ್ಳು ಅಪಪ್ರಚಾರ ಮಾಡುತ್ತಿದೆ ಎಂದು ನಗರಸಭಾ ಅಧ್ಯಕ್ಷ ಯುವರಾಜ್ ಹೇಳಿದರು.
ಬಿಜೆಪಿಯ ಸುದ್ದಿಗೋಷ್ಠಿಗೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ ಅವರು, ಬಿಜೆಪಿಯ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿರುವ ಸುವರ್ಣ 2ನೇ ಹಂತ ಸಂಪೂರ್ಣವಾಗಿ ವಿಫಲವಾಗಿದೆ. ಅದರಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿಲ್ಲ.
ಆದ್ದರಿಂದ ನೀರನ್ನು ಉಳಿಸಿ ಮೇ ಕೊನೆಯವರೆಗೂ ಪೂರೈಕೆಗಾಗಿ ಮುಂಜಾಗ್ರತೆ ಕ್ರಮವಾಗಿ ನಗರಸಭೆಯ ನಿವಾಸಿಗಳಿಗೆ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುವರ್ಣ 2ನೇ ಹಂತದ ಯೋಜನೆಯ ಪ್ರಕಾರ ಅಣೆಕಟ್ಟಿನಲ್ಲಿ 120 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹವಾಗಬೇಕಾಗಿತ್ತು. ಆದರೆ, ಕೇವಲ 70 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹವಾಗುತ್ತಿದೆ. ಆದ್ದರಿಂದ ಉಳಿದ ಈಗಲೇ ನೀರಿನ ಉಳಿತಾಯ ಮಾಡಿ ಅದನ್ನು 90 ದಿನಗಳಿಗೆ ಸಾಕಾಗುವಂತೆ ಮಾಡಲಾಗುತ್ತಿದೆ. ನಂತರ ಮಳೆ ಬಾರದಿದ್ದರೆ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತದೆ.
ಜನರು ನೀರಿಗಾಗಿ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.
2012 ಮತ್ತು 2013ರಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿಯೂ ಬೇಸಿಗೆಯಲ್ಲಿ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು ಎಂದರು.
ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಶಶಿರಾಜ್ ಕುಂದರ್, ಪ್ರಶಾಂತ್ ಭಟ್ ಇದ್ದರು.