ಕನ್ನಡ ಸಾಹಿತ್ಯ ಪುಸ್ತಕ ಅನಾಥ: ಮಾಧವ ಆಚಾರ್ಯ ವಿಷಾದ
ಉಡುಪಿ: ಕನ್ನಡ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಹೊಂದಿದ್ದ ಆ ಸಮಯದಲ್ಲಿ ಕನ್ನಡ ಸಾಹಿತ್ಯ ಎಂಬುದು ಭದ್ರತಳಹದಿಯನ್ನು ಹೊಂದಿತ್ತು. ಆದರೆ ಇಂದು ಕನ್ನಡ ಸಾಹಿತ್ಯ ಅತಂತ್ರ ಸ್ಥಿತಿಯಲ್ಲಿದೆ. ಕನ್ನಡ ಸಾಹಿತ್ಯ ಪುಸ್ತಕಗಳು ಅನಾಥವಾಗುತ್ತಿವೆ ಎಂದು ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಷಾದ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ, ಬರಹಗಾರ ರಾಘವೇಂದ್ರ ಉಡುಪಿ ಇವರ 4 ಹೊಸ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಕನ್ನಡ ಕೃತಿಗಳನ್ನು ಓದುತ್ತಿಲ್ಲ, ಇದರಿಂದ ಕನ್ನಡ ಮಾತನಾಡುವ ಶೈಲಿ, ಬರವಣಿಗೆಯ ಶೈಲಿ ಮುಖ್ಯವಾಗಿ ಕನ್ನಡದ ಶೈಲಿಯ ಬಗ್ಗೆ ಅರಿವು ಇಲ್ಲವಾಗಿದೆ ಎಂದು ವಿಷಾದಿಸಿದ ಅವರು ರಾಘವೇಂದ್ರ ಅವರು ಬರೆದ ಕೃತಿಗಳು ಕನ್ನಡ ಓದಿನ ಅಭಿರುಚಿಯನ್ನು, ಸಾಹಿತ್ಯಾಸಕ್ತಿಯನ್ನು ಬೆಳೆಸುವಲ್ಲಿ ಸಹಾಯಕವಾಗಲಿ ಎಂದು ಹಾರೈಸಿದರು.
ಅತಿಥಿಗಳು ಜೊತೆಯಾಗಿ ರಾಘವೇಂದ್ರ ಅವರು ಬರೆದ ಭಾರತೀಯ ಸಂಸ್ಕೃತಿ - ಸಂಸ್ಕಾರ - ಸಂಗೀತ - ಸಾಹಿತ್ಯ ಹಾಗೂ ಸಹಬಾಳ್ವೆ, ಕೂಸಪ್ಪನ ಸಂದೇಶಗಳು, ಅಶ್ವಮೇಧ ಮತ್ತು ಇತರ ಕತೆಗಳು, 3 ನಾಟಕಗಳು- ಛಾಯಾ, ನಳದಮಯಂತಿ, ಮಹಿಷಮರ್ದಿನಿ ಎಂಬ ಕೃತಿಗಳನ್ನು ಜಂಟಿಯಾಗಿ ಬಿಡುಗಡೆಗೊಳಿಸಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್‌ನ ಪ್ರಾಂಶುಪಾಲರಾದ ವಿದ್ಯಾವಂತ ಆಚಾರ್ಯ, ಡಾ. ಪದ್ಮನಾಭ ಕೇಕುಣ್ಣಾಯ, ಶಾಂತ ವಿ. ಆಚಾರ್ಯ, ಕಾಸರಗೋಡು ಚಿನ್ನಾ, ಕೃತಿಕಾರ ಕೆ. ರಾಘವೇಂದ್ರ ಭಟ್ಟ ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಸ್ವಾಗತಿಸಿದರು.
ಛಾಯಾಚಿತ್ರಗ್ರಾಹಕರ ಕ್ರೀಡಾಕೂಟ
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಅವಿಭಜಿತ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಇಲ್ಲಿನ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಉಡುಪಿ ಬಿಲ್ಡರ್ಸ್ ಅಸೊಸಿಯೇಶನ್‌ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಪತ್ರಿಕಾ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್ ಮಾತನಾಡಿ, ಛಾಯಾಚಿತ್ರಗ್ರಾಹಕರನ್ನು ಅಸಂಘಟಿತ ವಲಯಕ್ಕೆ ತರಲು ಕೆಪಿಎ ಪ್ರಯತ್ನಿಸುತ್ತಿದ್ದು, ಎಲ್ಲ ಛಾಯಾಚಿತ್ರಗ್ರಾಹಕರು ಪಿಂಚಣಿ ಸೌಲಭ್ಯ ಪಡೆಯಲು ಹೆಸರನ್ನು ಆದಷ್ಟು ಬೇಗ ನೋಂದಾಯಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಎಸ್‌ಕೆಪಿಎ ಉಡುಪಿ ವಲಯ ಅಧ್ಯಕ್ಷ ಸುಂದರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮತ್ತು ಉಡುಪಿ ಎಸ್‌ಕೆಪಿಎ ಜಿಲ್ಲಾಧ್ಯಕ್ಷ ವಾಸುದೇವ ರಾವ್, ನಗರಸಭಾ ಸದಸ್ಯ ಶಶಿರಾಜ್ ಕುಂದರ್, ಸಂಘದ ಉಡುಪಿ ವಲಯ ಕ್ರೀಡಾ ಕಾರ್ಯದರ್ಶಿ ವಾಮನ್ ಪಡುಕರೆ, ಕೇಂದ್ರ ಸಮಿತಿಯ ಕಾರ್ಯದರ್ಶಿ ವಿಲ್ಸನ್, ಕೇಂದ್ರ ಸಮಿತಿಯ ಉಪಾಧ್ಯಕ್ಷ ಪದ್ಮಪ್ರಸಾದ್ ಉಪಸ್ಥಿತರಿದ್ದರು.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಮಂಗಳೂರು, ಸುರತ್ಕಲ್, ಮೂಲ್ಕಿ, ಮೂಡುಬಿದಿರೆ, ಕಾರ್ಕಳ, ಕಾಪು, ಬ್ರಹ್ಮಾವರ, ಕುಂದಾಪುರ ಹಾಗೂ ಉಡುಪಿ ವಲಯದ ಛಾಯಾಚಿತ್ರಗ್ರಾಹಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಉಡುಪಿ ವಲಯ ಕಾರ್ಯದರ್ಶಿ ಸೆಬಾಸ್ಟಿನ್ ಅಂಚನ್ ಸ್ವಾಗತಿಸಿ, ರಾಘವೇಂದ್ರ ಶೇರಿಗಾರ್ ನಿರೂಪಿಸಿದರು. ಶ್ರೀಧರ್ ಶೆಟ್ಟಿಗಾರ್ ವಂದಿಸಿದರು.