ಬ್ಯಾಂಕ್ ಯೋಜನೆಗಳ ಜನತೆಗೆ ತಲುಪಿಸಿ: ರಾಜಗೋಪಾಲ್
ಬ್ರಹ್ಮಾವರ: ಬ್ಯಾಂಕ್‌ಗಳ ವಿವಿಧ ಯೋಜನೆಗಳು ಸಮಾಜಮುಖಿಯಾಗಿದ್ದು, ಅವುಗಳ ಸದುಪಯೋಗದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಈ ಯೋಜನೆಗಳನ್ನು ಜನತೆಗೆ ತಲುಪಿಸಬೇಕಾಗಿದೆ ಎಂದು ಮಂಗಳೂರು ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ವಿಭಾಗೀಯ ಪ್ರಬಂಧಕ ಎಸ್. ರಾಜಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆದ 6 ದಿನಗಳ ವ್ಯವಹಾರ ಪ್ರತಿನಿಧಿಗಳ ತರಬೇತಿ ಉದ್ಘಾಟಸಿ ಅವರು ಮಾತನಾಡಿದರು.
ಇಂಟೆಗ್ರಾ ಕಂಪನಿಯ ಮಹೇಶ ಮಾತನಾಡಿ, ಬ್ಯಾಂಕುಗಳು ಕಾರ್ಯನಿರ್ವಹಿಸದ ಪ್ರದೇಶದಲ್ಲಿ ವ್ಯವಹಾರ ಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜೊತೆಗೆ ಗ್ರಾಮೀಣ ಜನತೆಗೆ ಬ್ಯಾಂಕ್‌ಗಳ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿಸಲು ಸಾಧ್ಯ ಎಂದರು.
ಐಎಲ್‌ಎಫ್‌ಎಸ್ ಸಂಸ್ಥೆಯ ನಿವೃತ್ತ ಮುಖ್ಯ ಪ್ರಬಂಧಕ ಕೃಷ್ಣ ಪೂಜಾರಿ ಹಾಗೂ ಹರೀಶ ಇದ್ದರು.
ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಪ್ರಬಂಧಕ ಕೇಶವಮೂರ್ತಿ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಕೆ. ಕರುಣಾಕರ ಜೈನ್ ನಿರೂಪಿಸಿದರು. ಉಪನ್ಯಾಸಕ ಬಸವರಾಜ ಎಸ್. ವಂದಿಸಿದರು.
177 ವಿದ್ಯಾರ್ಥಿಗಳು ಗೈರು
ಉಡುಪಿ: ಸೋಮವಾರ ಉಡುಪಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಒಟ್ಟು 10441 ವಿದ್ಯಾರ್ಥಿಗಳಲ್ಲಿ 10264 ವಿದ್ಯಾರ್ಥಿಗಳು ಹಾಜರಿದ್ದು, 177 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿಂಧಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಶೋಧನಾ ಅನುದಾನ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಪದವಿ ಕಾಲೇಜಿನ 7 ಮಂದಿ ಅಧ್ಯಾಪಕರಿಗೆ ಯುಜಿಸಿ ವತಿಯಿಂದ ಕಿರು ಸಂಶೋಧನಾ ಯೋಜನೆಯಡಿ ಸಂಶೋಧನೆ ಕೈಗೆತ್ತಿಕೊಳ್ಳಲು ಅನುದಾನ ಮಂಜೂರಾಗಿದೆ. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಶೆಟ್ಟಿ, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಟಿ.ಎಸ್. ರಮೇಶ್, ಕನ್ನಡ ವಿಭಾಗ ಮುಖ್ಯಸ್ಥ ಡಾ. ಶ್ರೀಕಾಂತ್ ಸಿದ್ದಾಪುರ, ವಾಣಿಜ್ಯ ವಿಭಾಗದ ಶಿವಕುಮಾರ್ ಮತ್ತು ಪ್ರತಿಮಾ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ ಭಟ್, ರಸಾಯನಶಾಸ್ತ್ರ ವಿಭಾಗ ಅಧ್ಯಾಪಕ ಸುದರ್ಶನ ಶೆಟ್ಟಿ ಸಂಶೋಧನಾ ಅನುದಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಇಂದು ವಿದ್ಯುತ್ ನಿಲುಗಡೆ
ಮಂಗಳೂರು: 110/11 ಕೆವಿ ಕುಂದಾಪುರ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.18ರಂದು ಬೆಳಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ನಿಲುಗಡೆ ಪ್ರದೇಶಗಳು- 11 ಕೆವಿ ಕುಂದಾಪುರ, ಸಂಗಮ್, ಇಂಡಸ್ಟ್ರಿಯಲ್, ಅಂಪಾರು, ಜಪ್ತಿ, ಬಳ್ಕೂರು, ಜಪ್ತಿ ವಾಟರ್ ಸಪ್ಲಾಯ್, ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ಸುತ್ತಮುತ್ತಲಿನ ಪ್ರದೇಶಗಳು. 110/11 ಕೆವಿ ನಂದಿಕೂರು ವಿದ್ಯುತ್ ಉಪಕೇಂದ್ರದಲ್ಲಿ 220 ಕೆವಿ ಬೃಹತ್ ಕಾಮಗಾರಿ ವಿಭಾಗದವರು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.18ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ. ನಿಲುಗಡೆ ಪ್ರದೇಶಗಳು- ನಂದಿಕೂರು, ಎರ್ಮಾಳು, ಅಡ್ವೆ, ಎಲ್ಲೂರು, ಸಾಂತೂರು, ಉಚ್ಚಿಲ, ಪಣಿಯೂರು, ಪಡುಬಿದ್ರಿ, ಪಲಿಮಾರು, ಅವರಾಲು, ನಡಿಪಟ್ನ, ಪಾದೆಬೆಟ್ಟು, ಹೆಜಮಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
21ರಂದು ಯಕ್ಷಸನ್ಮಾನ
ಕುಂದಾಪುರ: ಬೆಂಗಳೂರಿನಲ್ಲಿ ಯಕ್ಷಗಾನ ಕಲಾ ಚಟುವಟಿಕೆಯನ್ನು ನಡೆಸಿಕೊಂಡು ಬಂದಿರುವ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಮಾ.21ರಂದು ಸಂಜೆ 6 ಗಂಟೆಗೆ ಇಲ್ಲಿನ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಯಕ್ಷಸನ್ಮಾನ - 2013 ಮತ್ತು 'ಕನ್ಯಾಂತರಂಗ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶ್ರೀಕ್ಷೇತ್ರ ಮಂದಾರ್ತಿ ಯಕ್ಷಗಾನ ಮೇಳದಲ್ಲಿ 40 ವರ್ಷಗಳಿಂದ ಯಕ್ಷವಂದಿತ ಗಜಮುಖನ ಪೆಟ್ಟಿಗೆಯ ಕೆಲಸ ನಿರತರಾಗಿರುವ ಅಪರೂಪದ ಸಾಧಕ ನರಸಿಂಹ ಮಡಿವಾಳ ಅವರಿಗೆ ರು. 10 ಸಾವಿರ ನಗದು ಮತ್ತು ಯಕ್ಷಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ, ಕಲಾ ವಿಮರ್ಶಕ ಪ್ರೊ.ಎಸ್.ವಿ. ಉದಯಕುಮಾರ್ ಶೆಟ್ಟಿ, ಶ್ರೀತ್ರಿಕಣ್ಣೇಶ್ವರಿ ವಾಣಿ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ತೇಜೇಶ್ವರ ರಾವ್ ಹಾಗೂ ಕಲಾವಿದ ವೈಕುಂಠ ಹೇರ್ಳೆ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಕೋಟ ಸುದರ್ಶನ ಉರಾಳ ತಿಳಿಸಿದ್ದಾರೆ.