ಚುನಾವಣಾ ಆಯೋಗದೊಂದಿಗೆಎಂಜಿನಿಯರಿಂಗ್ ವಿದ್ಯಾರ್ಥಿಗಳು
ಮಣಿಪಾಲ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗಕ್ಕೆ ಸಹಾಯ ಮಾಡಲು ಜಿಲ್ಲೆಯ 3 ಎಂಜಿನಿಯರಿಂಗ್ ಕಾಲೇಜುಗಳ 408 ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಕ್ಸಲ್ ಪೀಡಿತ, ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಆಯ್ದ 197 ಮತಗಟ್ಟೆಗಳಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯನ್ನು ನೇರವಾಗಿ ಆನ್ಲೈನ್ ಮೂಲಕ ವೀಕ್ಷಣೆ ಮಾಡುವುದಕ್ಕೆ ಉಡುಪಿ ಜಿಲ್ಲಾಡಳಿತ ಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಕ್ಕೆ ಜಿಲ್ಲಾಡಳಿತದೊಂದಿದೆ ಕೈ ಜೋಡಿಸಲು ಮಣಿಪಾಲದ ಎಂ.ಐ.ಟಿ., ಮೂಡಲಕಟ್ಟೆ ಎಂಜಿನಿಯರಿಂಗ್ ಕಾಲೇಜು ಮತ್ತು ನಿಟ್ಟೆ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 408 ವಿದ್ಯಾರ್ಥಿಗಳು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಈ ಕ್ಷೇತ್ರದ ಚುನಾವಣಾಧಿಕಾರಿ ಡಾ. ಮುದ್ದುಮೋಹನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್, ಇತರ ಅಧಿಕಾರಿಗಳು ಇದ್ದರು.
ಜಿಲ್ಲಾ ಮಾನಸಿಕ ಅರಿವು ಕಾರ್ಯಾಗಾರ ಇಂದು
ಮಂಗಳೂರು: ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ 'ಮಾನಸಿಕ ಆರೋಗ್ಯ ಅರಿವು' ಕಾರ್ಯಕ್ರಮದ ಕಾರ್ಯಾಗಾರ ಮತ್ತು ಅರಿವು ಮೂಡಿಸುವ ಜಾಥಾ 30ರಂದು ನಗರದಲ್ಲಿ ನಡೆಯಲಿದೆ. ಬೆಳಗ್ಗೆ 8.30ರಿಂದ 9ರ ವರೆಗೆ ನಗರ ಪೊಲೀಸ್ ಕಮಿಷನರ್ ಕಚೇರಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಎಸ್ಡಿಎಂ ಕಾನೂನು ವಿದ್ಯಾಲಯದಿಂದ ಜಾಥಾ ಹೊರಟು ಕೊಡಿಯಾಲಬೈಲ್ನ ಟಿ.ವಿ.ರಮಣ ಪೈ ಹಾಲ್ ತಲಪುವುದು. 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೈಕೋರ್ಟ್ ನ್ಯಾಯಮೂರ್ತಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ ನ್ಯಾ.ಎನ್.ಕುಮಾರ್ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ವಿ.ಪ್ರಕಾಶ್, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿದೇವಿ, ಮನೋರೋಗ ತಜ್ಞ ಡಾ.ಸುನಿಲ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಮತ್ತಿತರರಿದ್ದರು.
ಚುನಾವಣೆ ಬಹಿಷ್ಕಾರ
ಪುತ್ತೂರು: ತಾಲೂಕಿನ ಕೋಡಿಂಬಾಳ ಗ್ರಾಮದ ಅಸಂತಡ್ಕ, ದಂಡುಗುರಿ ದಲಿತ ಕಾಲೋನಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ಕಾಲೋನಿ ನಿವಾಸಿಗಳು ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ನಮ್ಮ ಹಕ್ಕು ಸಂಘಟನೆ ಅಧ್ಯಕ್ಷ ಬಾಬು ದಂಡುಗುರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಈ ಕಾಲೋನಿಗೆ ಯಾವುದೇ ಸೌಲಭ್ಯ ನೀಡಲಾಗಿಲ್ಲ. ಈ ಬಗ್ಗೆ ಪಂಚಾಯಿತಿಯು ಶಾಸಕರು, ಸಂಸದರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತರ ಹೆಸರಿನಲ್ಲಿ ಮೇಲ್ವರ್ಗದ ಜನರು ವಿದ್ಯುತ್, ರಸ್ತೆ, ನೀರು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ನಮ್ಮ ಹೆಸರಿನಲ್ಲಿ ಮೇಲ್ವರ್ಗದವರಿಗೆ ಸೌಲಭ್ಯ ದೊರಕಿಸಿ ನಮಗೆ ವಂಚಿಸಿದ್ದಾರೆ. ನಮ್ಮ ತಾಳ್ಮೆ ಪರೀಕ್ಷಿಸುತ್ತಿರುವ ರಾಜಕಾರಣಿಗಳಿಗೆ ಚುನಾವಣೆ ಬಹಿಷ್ಕಾರ ನಡೆಸುವ ಮೂಲಕ ಸೂಕ್ತ ಉತ್ತರ ನೀಡಲಿದ್ದೇವೆ ಎಂದರು. ನಮ್ಮ ಹಕ್ಕು ಸಂಘಟನೆ ಕಾರ್ಯದರ್ಶಿ ರಾಘವೇಂದ್ರ ದಂಡುಗುರಿ, ಉಪಾಧ್ಯಕ್ಷ ತನಿಯಪ್ಪ ಅಸಂತಡ್ಕ, ಜೊತೆಕಾರ್ಯದರ್ಶಿ ತನಿಯ, ಸದಸ್ಯ ಹುಕ್ರಪ್ಪ ಇದ್ದರು.
ಇಂದಿನಿಂದ ಅದ್ಯಪಾಡಿ ದೇವಳದ ಬ್ರಹ್ಮಕಲಶೋತ್ಸವ
ಮಂಗಳೂರು: ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ 30 ರಿಂದ ಏ. 4ರವರೆಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ದೇವಳ ಜೀಣೋದ್ಧಾರ ಕಾಮಗಾರಿ ಪ್ರಾರಂಭಿಸಲಾಗಿದ್ದು, ಮಹಾದ್ವಾರ, ಅನ್ನಛತ್ರ, ಅತಿಥಿಗೃಹ, ನಾಗಬನ, ತೀರ್ಥಬಾವಿಯ ನವೀಕರಣ, ಪ್ರಾಂಗಣಕ್ಕೆ ತಗಡಿನ ಹೊದಿಕೆ ಸೇರಿದಂತೆ ಸುಮಾರು ರು. 1ಕೋಟಿ ಮೊತ್ತದ ಖರ್ಚುವೆಚ್ಚ ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭ ಶ್ರೀ ದೇವರಿಗೆ ರಜತ ಕವಚ ಸಮರ್ಪಿಸಲು ನಿರ್ಧರಿಸಲಾಗಿದೆ. 30 ರಂದು ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರಿ ದೇವಸ್ಥಾನದ ಶ್ರೀ ನಿರಂಜನ ಸ್ವಾಮೀಜಿ ಆಶೀರ್ವಚನ ನೀಡುವರು ಎಂದು ಬಂಟರ ಯಾನೆ ನಾಡವರ ಮಾತೃ ಸಂಘ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.
ಕೋವಿ ಪೊಲೀಸ್ ಠಾಣೆಗೆ ಒಪ್ಪಿಸದಿದ್ದಲ್ಲಿ ಕಾನೂನು ಕ್ರಮ
ವಿಟ್ಲ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೋವಿ ಪರವಾನಗಿದಾರರು ತಮ್ಮ ಕೋವಿಗಳನ್ನು ಭಾನುವಾರ ಸಂಜೆಯೊಳಗೆ ವಿಟ್ಲ ಪೊಲೀಸ್ ಠಾಣೆಗೆ ಒಪ್ಪಿಸದಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಟ್ಲ ಠಾಣಾಧಿಕಾರಿ ರಾಘವೇಂದ್ರ ಟಿ.ಆರ್ ಎಚ್ಚರಿಕೆ ನೀಡಿದ್ದಾರೆ. ಮೂರು ವಾರಗಳ ಹಿಂದೆಯೇ ಕೋವಿ ಪರವಾನಿಗೆದಾರರು ತಮ್ಮ ಕೋವಿಗಳನ್ನು ಠೇವಣಿ ಇರುವ ಅಂಗಡಿಗಳಲ್ಲಿ ಠೇವಣಿ ಇರಿಸಿ, ಠಾಣೆಗೆ ಮಾಹಿತಿ ನೀಡಬೇಕೆಂದು ಅಥವಾ ಕೋವಿಗಳನ್ನು ಠಾಣೆಗೆ ಒಪ್ಪಿಸಬೇಕೆಂದು ಈಗಾಗಲೇ ಎರಡು ಭಾರಿ ಪತ್ರಿಕಾ ಪ್ರಕಟನೆ ನೀಡಿದ್ದರೂ ಹಲವು ಮಂದಿ ತಮ್ಮ ಕೋವಿಗಳನ್ನು ಮರಳಿಸಿಲ್ಲ. ಭಾನುವಾರ ಸಂಜೆಯೊಳಗೆ ತಮ್ಮ ಕೋವಿಗಳನ್ನು ವಿಟ್ಲ ಠಾಣೆಗೆ ಮರಳಿಸದಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಏ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಯಕ್ಕೆ
ಸುಳ್ಯ: ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಪರ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 2ರಂದು ಮಧ್ಯಾಹ್ನ 1 ಗಂಟೆಗೆ ಸುಳ್ಯಕ್ಕೆ ಆಗಮಿಸಲಿದ್ದಾರೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಾಂಗ್ರೆಸ್ ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಒಂದು ಸುತ್ತು ಮುಗಿಸಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ನಾಯಕರು, ಮತದಾರರನ್ನು ಭೇಟಿಯಾಗಿ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 5,000ಕ್ಕಿಂತಲೂ ಅಧಿಕ ಮತಗಳ ಲೀಡನ್ನು ಕಾಂಗ್ರೆಸ್ ಅಭ್ಯರ್ಥಿಗೆ ತಂದುಕೊಡುವುದಾಗಿ ಹೇಳಿದರು. ಏ. 1ರಂದು ಸುಳ್ಯದಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಬಿ. ಜನಾರ್ದನ ಪೂಜಾರಿ, ವಿನಯ ಕುಮಾರ್ ಸೊರಕೆ, ಮಿಥುನ್ ರೈ ಭಾಗವಹಿಸಲಿದ್ದಾರೆ. ಏ. 4ರಂದು ಮಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಏ. 9ರಂದು ಸುಳ್ಯದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಹಿಂದೂಸ್ಥಾನ್ ಜನತಾ ಪಕ್ಷದಿಂದ ಸುಪ್ರೀತ್ ಸ್ಪರ್ಧೆ
ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕೆ ಸುಳ್ಳು ಆಶ್ವಾಸನೆಗಳ ನೀಡುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಹಿಂದೂಸ್ಥಾನ್ ಜನತಾ ಪಕ್ಷದ ಲೋಕಸಭೆ ಅಭ್ಯರ್ಥಿ ಸುಪ್ರಿತ್ ಕುಮಾರ್ ಆರೋಪಿಸಿದ್ದಾರೆ.
ಯುಪಿಎ ಸರ್ಕಾರವು ಬಡ ರೈತರ ಜಮೀನನ್ನು ಬೃಹತ್ ಕಂಪನಿಗಳ ಒಳ ಒಪ್ಪಂದದಿಂದ ಭೂಸ್ವಾದೀನ ಮಾಡುವುದರಲ್ಲಿಯೇ ಉತ್ಸಾಹ ತೋರಿದೆ. ಜಿಲ್ಲೆಯಲ್ಲಿ ರೈಲು ಸಂಪರ್ಕ, ಶಾಶ್ವತ ನೀರಾವರಿ, ನಿರುದ್ಯೋಗ, ವಸತಿ ಸೌಲಭ್ಯ ಸಮಸ್ಯೆಗಳು ತಾಂಡವವಾಡುತ್ತಿದ್ದರೂ, ಸರ್ಕಾರ ತನ್ನ ಲಾಭಕ್ಕಾಗಿ ಮತಬ್ಯಾಂಕ್ ಮಾಡುತ್ತಿದೆ.
ಇವೆರಡಕ್ಕೂ ಪರ್ಯಾಯ ಪಕ್ಷವಾಗಿ ಹಿಂದೂಸ್ಥಾನ ಜನತಾ ಪಕ್ಷ ಹೊರಹೊಮ್ಮಲಿದೆ. ಬಡಜನರ ಪಕ್ಷವಾಗಿ ಉದಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಳಿನ್ ಕುಮಾರ್ಗೆ 24ನೇ ಸ್ಥಾನ: ಬಿಜೆಪಿ ಹರ್ಷ
ಮಂಗಳೂರು: ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಲೋಕಸಭೆ ಸದಸ್ಯರ ಸಾಧನೆ, ಸ್ಪಂದನೆ ಮತ್ತು ನಿರ್ವಹಣೆ ಕುರಿತಂತೆ ರ್ಯಾಂಕಿಂಗ್ನಲ್ಲಿ 24ನೇ ಸ್ಥಾನ ನಳಿನ್ ಕುಮಾರ್ ಕಟೀಲ್ ಅವರಿಗೆ ದೊರಕಿರುವುದು ಅವರ ಸಾಧನೆಗೆ ಗರಿ ಮೂಡಿಸಿದಂತಾಗಿದೆ ಎಂದು ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ರವಿಶಂಕರ ಮಿಜಾರ್ ಹೇಳಿದ್ದಾರೆ.
ಲೋಕಸಭೆ ಸಂಸತ್ತಿನಲ್ಲಿ ಹಾಜರಾತಿ, ಚರ್ಚೆಯಲ್ಲಿ ಭಾಗವಹಿಸುವಿಕೆ, ವಿಷಯದ ಮಂಡನೆ, ಮತದಾರರೊಂದಿಗೆ ಸ್ಪಂದನೆ, ಕ್ಷೇತ್ರದಲ್ಲಿ ಯೋಜನೆಗಳಿಗೆ ಅನುದಾನ ಒದಗಿಸುವಿಕೆ ಕುರಿತಂತೆ ನಡೆದ ಸಮೀಕ್ಷೆಯಲ್ಲಿ 545 ಲೋಕಸಭೆ ಸದಸ್ಯರ ಪೈಕಿ ದ.ಕ. ಜಿಲ್ಲಾ ಲೋಕಸಭೆ ಸದಸ್ಯ ನಳಿನ್ ಕುಮಾರ್ ಕಟೀಲ್ 24ನೇ ರ್ಯಾಂಕ್ ಗಳಿಸಿದ್ದಾರೆ. ಆದರೆ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ 355ನೇ ಸ್ಥಾನ ಗಳಿಸಿರುವುದು ಗಮನಿಸಿದರೆ, ಮುಂದಿನ ಅವಕಾಶದಲ್ಲಿ ಹೆಚ್ಚಿನ ಸಾಧನೆ ಮಾಡುವ ಭರವಸೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂಜಾರಿ ಗೆಲವಿಗೆ ಶ್ರಮಿಸಿ: ಸಚಿವ ಅಭಯಚಂದ್ರ ಜೈನ್
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಹಾಗೆಯೇ ಜನಾರ್ದನ ಪೂಜಾರಿಯವರ ಗೆಲುವಿಗೆ ಪ್ರಯತ್ನಿಸಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿಯ ಲಲಿತ್ ಮಹಲ್ನ ಸಭಾಂಗಣದಲ್ಲಿ ಮೂಲ್ಕಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಕಾರ್ಯದರ್ಶಿ ವಸಂತ ಬೆರ್ನಾಡ್, ಮೂಲ್ಕಿ ವಲಯ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಗೋಪಿನಾಥ ಪಡಂಗ, ಸರೋಜಿನಿ ಸುವರ್ಣ ಇದ್ದರು.
'ಕೈ' ಮೇಲೆತ್ತುವ ಹೊಣೆ ಯುವಕರದ್ದು: ಕುಂದರ್
ಉದ್ಯಾವರ: ಯುವ ಕಾಂಗ್ರೆಸಿಗರ ಮೇಲೆ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ. ಮುಂದಿನ ಚುನಾವಣೆಯಲ್ಲಿ ತಾವು ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸುವಲ್ಲಿ ಕಟಿಬದ್ಧರಾಗಬೇಕು ಎಂದು ಉದ್ಯಾವರ ಜಿಲ್ಲಾ ಪಂಚಾಯಿತಿ ಸದಸ್ಯ ದಿವಾಕರ ಕುಂದರ್ ತಿಳಿಸಿದರು.ಅವರು ಶನಿವಾರ ಇಲ್ಲಿನ ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು
ಸಭೆಯಲ್ಲಿ ತಾ.ಪಂ. ಸದಸ್ಯರಾದ ಗಿರೀಶ್ ಕುಮಾರ್, ಕಾಪು ಉತ್ತರ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಿಯಾಜ್ ಪಳ್ಳಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಉದ್ಯಾವರ ಮಾತನಾಡಿದರು.
'ಪೂಜಾರಿ ಪತ್ರಿಕಾಗೋಷ್ಠಿ ನಡೆಸಿದರು, ಹೋರಾಟವಲ್ಲ'
ಮಂಗಳೂರು: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರು ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರೇ ವಿನಃ ಸಮಸ್ಯೆ ಪರಿಹಾರಕ್ಕೆ ಹೋರಾಟ ನಡೆಸಲಿಲ್ಲ ಎಂದು ಸಿಪಿಐ ಲೋಕಸಭೆ ಅಭ್ಯರ್ಥಿ ಕೆ. ಯಾದವ ಶೆಟ್ಟಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸವಾಲಾಗಿ ಸ್ವೀಕರಿಸಲಾಗಿದೆ. ಪ್ರಚಾರದ ಮೂಲಕ ಅಭಿವೃದ್ಧಿಯಾಗಿದೆ ಎಂಬುದಾಗಿ ಬಿಂಬಿಸುವ ಮೂಲಕ ಜನರನ್ನು ಮರುಳು ಮಾಡಲಾಗುತ್ತಿದೆ. ದೊಡ್ಡ ಕಂಪನಿಗಳಿಗೆ ಅನುಕೂಲವಾಗುವ ಆರ್ಥಿಕ ನೀತಿ ರೂಪಿಸಲಾಗುತ್ತಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಗಮನಹರಿಸುತ್ತಿಲ್ಲ ಎಂದರು.ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸುವ ಉದ್ದೇಶದಿಂದ ಸಿಪಿಐ ಮತ್ತು ಸಿಪಿಐಎಂ ಜಂಟಿಯಾಗಿ ಚುನಾವಣೆ ಕಣಕ್ಕಿಳಿದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿ. ಸೀತಾರಂ ಬೇರಿಂಜ, ವಾಸುದೇವ, ವಸಂತ ಆಚಾರಿ ಇದ್ದರು.
ಬಂಟಕಲ್ಲು: ಏ. 2ರಂದು ಡಾ. ಅಬ್ದುಲ್ ಕಲಾಂ ಭೇಟಿ
ಉಡುಪಿ: ಬಂಟಕಲ್ಲಿನ ಸೋದೆ ಮಠದ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಆ್ಯಂಡ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಏ. 2ರಂದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಭೇಟಿ ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ. ಎಸ್. ರಾಧಕೃಷ್ಣ ಐತಾಳ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಬ್ದುಲ್ ಕಲಾಂ ಅವರು ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಸಂಸ್ಥಾಪಕ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿಗಳ ಆಗಮನದ ನೆನಪಿನ ದ್ಯೋತಕವಾಗಿ, ಸಂಸ್ಥೆಯ ಆವರಣದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡ 3 ಸುಸಜ್ಜಿತ ಶೈಕ್ಷಣಿಕ ಸಮುಚ್ಛಯಗಳು ಅನಾವರಣಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ರತ್ನ ಕುಮಾರ್ ಉಪಸ್ಥಿತರಿದ್ದರು.
ಜನತಾ ಪ್ರಣಾಳಿಕೆ ಜಾರಿಗೆ ತರಲು ಒತ್ತಾಯ
ಮಡಿಕೇರಿ ಜನತಾ ಪ್ರಣಾಳಿಕೆ ಲೋಕಸಭಾ ಚುನಾವಣೆ 2014 ಎಂಬ ಹೆಸರಿನಲ್ಲಿ ಒಟ್ಟು 15 ಅಂಶಗಳನ್ನು ಜಾರಿಗೆ ತರುವುದಾಗಿ ವಾಗ್ದಾನ ನೀಡಬೇಕೆಂದು ಜನರ ಬೆಂಬಲ ಬಯಸುವ ಪಕ್ಷಗಳೊಡನೆ ಮನವಿ ಮಾಡಿಕೊಂಡಿರುವುದಾಗಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಜಿಲ್ಲಾ ಸಮಿತಿ ಸದಸ್ಯ ಪಿ.ಕೆ. ರೆಹಮಾನ್ ತಿಳಿಸಿದರು. ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಹಮಾನ್, ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಹಕ್ಕು ದೇಶದ ಸಕಲ ನಾಗರಿಕರಿಗೂ ದೊರೆಯುವಂತಾಗಲು ಸಂವಿಧಾನ ಉತ್ತಮ ಜೀವನದ ಹಕ್ಕನ್ನು ಮೂಲ ಹಕ್ಕಾಗಿ ಪರಿಗಣಿಸಬೇಕು. ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು. ಸಕಲ ಸರ್ಕಾರಿ ಸಹಾಯ ಮತ್ತು ಅನುದಾನಗಳು ಈ ಇಂಡೆಕ್ಸ್ನಲ್ಲಿ ಆಧಾರದಲ್ಲಿಯೇ ಜಾರಿಗೊಳಿಸಲ್ಪಡಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೂಣ ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷದ ಎಲ್ಲಾ ದಿನಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಅಪ್ಸರ್, ಸದಸ್ಯ ಟಿ.ಎ. ಬಶೀರ್, ಅಬ್ದುಲ್ಲಾ ಮಡಿಕೇರಿ ಇದ್ದರು.
ತೃತೀಯ ರಂಗದ ರಚನೆಗೆ ಜೆಡಿಎಸ್ ಬೆಂಬಲ: ಎಸ್ಡಿಪಿಐ
ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಅವರಿಗೆ ಬೆಂಬಲ ಸೂಚಿಸುವುದಾಗಿ ಜಿಲ್ಲಾ ಎಸ್ಡಿಪಿಐ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ವಿಶ್ವನಾಥ್ ಗೆಲವಿಗೆ ಎಸ್ಡಿಪಿಐ ಮಹತ್ವದ ಪಾತ್ರ ವಹಿಸಿತ್ತು. ಆದರೆ, ಅವರು ಜಿಲ್ಲೆಗಾಗಲಿ, ರಾಜ್ಯಕ್ಕಾಗಲಿ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಇದೀಗ ರಾಜ್ಯ ಮಟ್ಟದಲ್ಲಿ ಜೆಡಿಎಸ್ನ್ನು ಎಸ್ಡಿಪಿಐ ಬೆಂಬಲಿಸಲಿದೆ ಎಂದರು. ಏ. 1ರಂದು ಎಸ್ಡಿಪಿಐ ಕಾರ್ಯಕರ್ತರ ಸಮಾವೇಶವನ್ನು ಮಧ್ಯಾಹ್ನ 2 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಲಿಯಾಕತ್ ಆಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಅಡ್ಕಾರ್, ನಗರ ಸಮಿತಿ ಅಧ್ಯಕ್ಷ ನೂರುದ್ದೀನ್, ನಗರಸಭಾ ಸದಸ್ಯ ಪೀಟರ್, ಮನ್ಸೂರು ಇದ್ದರು.
'ಆರ್ಟಿಐ, ಆರ್ಟಿಇ, ಕ್ಷೀರಭಾಗ್ಯ ಕಾಂಗ್ರೆಸ್ ಕೊಡುಗೆ'
ಮಂಗಳೂರು: ಕಾಂಗ್ರೆಸ್ ನೈತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಆರ್ಟಿಐ, ತಂದಿತು, ಬಡ ಮಕ್ಕಳ ಶಿಕ್ಷಣಕ್ಕಾಗಿ ಆರ್ಟಿಇ ತಂದಿದೆ. ಸರ್ವರ ಶಿಕ್ಷಣಕ್ಕೆ ಸರ್ವ ಶಿಕ್ಷಣ ಅಭಿಯಾನ ನಡೆಸಿದೆ ಎಂದು ಎನ್ಎಸ್ಯುಐ ರಾಜ್ಯಾಧ್ಯಕ್ಷ ಸಿದ್ದವೀರ್ ಎಸ್.ವಿ. ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ಷೀರ ಭಾಗ್ಯ, ಶೈಕ್ಷಣಿಕ ಸಾಲ ಸಹಿತ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕ್ರಾಂತಿಕಾರಕ ಕೊಡುಗೆಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಎನ್ಎಸ್ಯುಐ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಎನ್ಎಸ್ಯುಆ ರಾಜ್ಯಾದ್ಯಂತ ಪ್ರಚಾರ ಅಭಿಯಾನದಲ್ಲಿ ತೊಡಗಿದೆ. ವಿದ್ಯಾರ್ಥಿ ಪ್ರಣಾಳಿಕೆಯ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಎನ್ಎಸ್ಯುಐ ರಾಜ್ಯ ಉಸ್ತುವಾರಿ ಭೂಷಣ್ ಪಿ. ಜಿಲ್ಲಾಧ್ಯಕ್ಷ ಅಶಿತ್ ಪಿರೇರಾ, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಇದ್ದರು.
ಇಂದು ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಜಾಥಾ
ಮಡಿಕೇರಿ: ಮಂಗಳೂರು ವಿಶ್ವವಿದ್ಯಾನಿಲಯ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಸಮಾಜ ಕಾರ್ಯ ವಿಭಾಗ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಇವರ ಸಂಯುಕ್ತಾಶ್ರಯದಲ್ಲಿ 30 ರಂದು ಬೆಳಗ್ಗೆ 10 ಗಂಟೆಗೆ ಇಂದಿರಾಗಾಂಧಿ ವೃತ್ತದಿಂದ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಜಾಥಾ ನಡೆಯಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಉದ್ಘಾಟಿಸಲಿದ್ದಾರೆ. ನಂತರ ಮಾದಕ ವ್ಯಸನಗಳ ವಿರುದ್ಧ ಸಂದೇಶ ಸಾರುವ ಗಾಳಿಪಟ ಹಬ್ಬ ಸ್ಪರ್ಧೆ (ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ) ಬೆಳಗ್ಗೆ 11 ಗಂಟೆಗೆ ಎ.ಪಿ.ಎಂ.ಸಿ. ಮೈದಾನದಲ್ಲಿ ನಡೆಯಲಿದೆ. ಸ್ಪರ್ಧೆಯನ್ನು ನಗರಸಭೆ ಪೌರಾಯುಕ್ತ ಪುಷ್ಪಾವತಿ ಉದ್ಘಾಟಿಸಲಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಡಾ. ಪ್ರಶಾಂತ್ ಸಿ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಪಕ್ಷಿ ತಜ್ಞ ಡಾ. ನರಸಿಂಹನ್, ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ನ ಸಹರಾಜ್ಯಪಾಲರಾದ ಆರ್.ಎನ್. ರವೀಂದ್ರ ರೈ ಭಾಗವಹಿಸಲಿದ್ದಾರೆ.
ಮಲ್ಪೆಯಲ್ಲಿ ಮತದಾನ ಜಾಗೃತಿ
ಉಡುಪಿ: ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಮುದ್ದುಮೋಹನ್ ಹೇಳಿದರು. ಅವರು ಶನಿವಾರ ಮಲ್ಪೆ ಬಂದರಿನ ಹರಾಜು ಪ್ರಾಂಗಣದಲ್ಲಿ ಸ್ವೀಪ್ ಕಾರ್ಯಕ್ರಮದಡಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ನೆರೆದ ಮೀನುಗಾರ ಮಹಿಳೆಯರು ಮತ್ತು ಪುರುಷರಿಗೆ ಮತದಾನ ಮಾಡುವ ಪ್ರತಿಜ್ಞೆ ಬೋಧಿಸಿದರು. ಜಿ.ಪಂ. ಸಿಇಒ ಎಂ. ಕನಗವಲ್ಲಿ ಮಾತನಾಡಿ, ಮತದಾನದ ಹಕ್ಕು ಸಂವಿಧಾನ ನಿ, ಜಿಪಂ ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗಣಪತಿ ಭಟ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ಮೀನು ವ್ಯಾಪಾರಸ್ಥರ ಸಂಘದ ರಮೇಶ್ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ದಯಾನಂದ ಸುವರ್ಣ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಜನಾದೇವಿ, ಕುಮಾರ್ಸ್ವಾಮಿ, ಗಣೇಶ್ ಇದ್ದರು.
'ರಾಜ್ಯ ಸರ್ಕಾರದ ಸಾಧನೆ ಮುಂದಿಟ್ಟು ಮತಯಾಚನೆ'
ಬೆಳ್ತಂಗಡಿ: ಮಂಗಳೂರು ಮತ್ತು ಉಡುಪಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಉಭಯ ಕ್ಷೇತ್ರಗಳ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಸಹಕಾರಿ ಧುರೀಣ ಎಂ.ಎನ್. ರಾಜೇಂದ್ರ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಶನಿವಾರ ಬೆಳ್ತಂಗಡಿ ಗುರುನಾರಾಯಣ ಕಟ್ಟಡದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಹತ್ತು ತಿಂಗಳ ಸಾಧನೆಗಳನ್ನು ಮುಂದಿಟ್ಟು ಮತ ಕೇಳಲಿದ್ದೇವೆ. ಬಿಜೆಪಿ ಮೋದಿ ಎಂಬ ವ್ಯಕ್ತಿಯ ಆಧಾರದಲ್ಲಿ ಮತ ಕೇಳುತ್ತಿದ್ದು ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ದೊರಕಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳು ತಮ್ಮ ಹೆಸರಿನಲಿ ಮತಕೇಳಲಿ ಎಂದು ಸವಾಲು ಹಾಕಿದರು. ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಪಕ್ಷದ ಮುಖಂಡರಾದ ಇ. ಸುಂದರ ಗೌಡ, ರಾಜಶೇಖರ ಅಜ್ರಿ, ಸುದರ್ಶನ್ ಜೈನ್ ಇದ್ದರು.