ಪೇಜಾವರ ಸ್ವಾಮೀಜಿ ಅನಿಷ್ಟ ಪದ್ಧತಿ ತಡೆಯಲು ಮುಂದಾಗಲಿ: ಶಿವರಾಮು
ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇನ್ನೂ ಮಡೆಸ್ನಾನ, ಪಂಕ್ತಿಭೇದ ಇತ್ಯಾದಿಗಳ ಮೌಢ್ಯ ಆಚರಣೆಗಳು ಜೀವಂತವಾಗಿವೆ ಎನ್ನುವುದೇ ಅವಮಾನಕರ ವಿಷಯ. ಇನ್ನಾದರೂ ಪೇಜಾವರ ಶ್ರೀಗಳು ಮೊದಲು ಕೃಷ್ಣ ಮಠದಲ್ಲಿ ಈ ಅನಿಷ್ಟ ಪದ್ಧತಿಗಳನ್ನು ನಿಲ್ಲಿಸಿ ತಮ್ಮ ಪ್ರಜ್ಞಾವಂತಿಕೆ, ಪ್ರಾಮಾಣಿಕತೆಯನ್ನು ತೋರಿಸಬೇಕು. ಅವರಿಗೆ ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದ್ದಾರೆ.
ಅವರು ಭಾನುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣ ಮಠದಲ್ಲಿ ಇತ್ತೀಚೆಗೆ ಊಟಕ್ಕೆ ಕುಳಿತ ಹಿಂದೂ ಮಹಿಳೆಯನ್ನು ಪಂಕ್ತಿಯಿಂದ ಎಬ್ಬಿಸಿ ಹೊರ ಕಳುಹಿಸಿರುವುದು ದಲಿತರ ಕೇರಿಗೆ ಭೇಟಿ ನೀಡುವ ಪೇಜಾವರ ಶ್ರೀಗಳ ಪ್ರಾಮಾಣಿಕತೆ ಮತ್ತು ಬದ್ಧತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಆರೋಪಿಸಿದ್ದಾರೆ.
ಕೃಷ್ಣಮಠ ಮಾತ್ರವಲ್ಲದೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿಯೂ ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿದ್ದು, ಈಗಾಗಲೇ ಪ್ರಗತಿಪರ ಸಂಘಟನೆಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಇಂತಹ ಅನಿಷ್ಟಗಳ ನಿವಾರಣೆಗೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕು ಮತ್ತು ಶಾಶ್ವತವಾಗಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದವರು ಹೇಳಿದರು.
ಇಂದು ಪ್ರತಿಭಟನೆ: ಈ ಅನಿಷ್ಟ ಆಚರಣೆಗಳು ನಿಲ್ಲದಿದ್ದಲ್ಲಿ, ತಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದ ಶಿವರಾಮು, 5ರಂದು ಸರ್ಕಾರವು ಪಂಕ್ತಿಭೇದ, ಮಡೆಸ್ನಾನಯಂತಹ ಆಚರಣೆಯ ವಿರುದ್ಧ ಕ್ರಮ ತಕ್ಷಣ ಕೈಗೊಳ್ಳುವಂತೆ ಹಾಗೂ ಮೌಢ್ಯಪ್ರತಿಬಂಧಕ ಕಾಯ್ದೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಯಲಿದೆ. ಬೆಳಗ್ಗೆ 9.30ಕ್ಕೆ ಕೃಷ್ಣ ಮಠದ ಮುಂಭಾಗದಲ್ಲಿರುವ ಕನಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ವಿವಿಧ ಸಂಘಟನೆಗಳ ಶಶಿಧರ ಸಂಗಾಪುರ, ನರಸಿಂಹ ಪ್ರಸಾದ್ ಮೈಸೂರು, ಎಸ್.ಡಿ. ಮಂಜುನಾಥ್, ಎಚ್. ಬೀರಪ್ಪ, ಜಯನ್ ಮಲ್ಪೆ, ಪ್ರೊ.ಕೆ. ಫಣಿರಾಜ್ ಹಾಗೂ ಕೃಷ್ಣ ಮಠದಲ್ಲಿ ಅವಮಾನಿತರಾದ ಮಹಿಳೆಯ ಪತಿ ನಿತ್ಯಾನಂದ ಶೆಟ್ಟಿ ಇದ್ದರು.
ಜನಾರ್ದನ ಪೂಜಾರಿ ಯಾಕೆ ಮೌನ..?
ಘಟನೆ ನಡೆದು 20 ದಿನಗಳೇ ಕಳೆದಿವೆ. ಈವರೆಗೂ ಅವಿಭಜಿತ ದ.ಕ. ಜಿಲ್ಲೆಯ ಯಾವೊಬ್ಬನೇ ಜನಪ್ರತಿನಿಧಿ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ಪ್ರಗತಿಪರ ರಾಜಕಾರಣಿ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರಿನ ಜನಾರ್ದನ ಪೂಜಾರಿ ಅವರು ಕೂಡ ಮೌನವಾಗಿದ್ದಾರೆ. ಕೂಡಲೇ ಜವಾಬ್ದಾರಿ ಇರುವ ಎಲ್ಲಾ ಜನಪ್ರತಿನಿಧಿಗಳು ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು.
ಟಿ ನಿತ್ಯಾನಂದ ಶೆಟ್ಟಿ