ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬಡತನದ ನೋವಿಗೆ ಅನಾರೋಗ್ಯದ ಬರೆ

Rashmi Kasaragodu
Updated On : 5 May 2014, 1:15 am

ಅನಾರೋಗ್ಯ ಪೀಡಿತ ತಾಯಿ, ಹುಟ್ಟು ಅಂಗವಿಕಲ ಮಗ, ಹೃದಯ ಕಾಯಿಲೆ ಪೀಡಿತ ಮಗಳು

ಟಿ ಮೌನೇಶ ವಿಶ್ವಕರ್ಮ
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೋಳಂಗಡಿಯ ಮನೆಯೊಂದರಲ್ಲಿ ಅನಾರೋಗ್ಯ ಪೀಡಿತ ತಾಯಿ ಜತೆಯಲ್ಲಿ ನಿತ್ಯವೂ ನೋವಿನಲ್ಲೇ ದಿನ ಕಳೆಯುವ ಅಣ್ಣ- ತಂಗಿಯ ಸ್ಥಿತಿಯನ್ನು ಕಂಡರೆ ಎಂಥವರ ಮನವೂ ಕರಗಲೇಬೇಕು.
ಆ ಕುಟುಂಬದಲ್ಲಿ ಇರುವ ಸದಸ್ಯರ ಸಂಖ್ಯೆ ಮೂರು. ಆದರೆ ಮೂವರೂ ಕಾಯಿಲೆಯಿಂದ ಬಳಲುತ್ತಿರುವುದು ಇಡಿ ಕುಟುಂಬದ ಸ್ಥೈರ್ಯವನ್ನೇ ಕುಗ್ಗಿಸಿದೆ. ಸಾಮಾನ್ಯ ಔಷಧಿಗೆ ಗುಣವಾಗದ, ಎದ್ದು ನಿಲ್ಲಲಾಗದ, ನಿಂತರೆ ಕೂರಲಾಗದ, ಮಲಗಿದರೆ ಏಳಲಾಗದ, ಎದ್ದರೂ ನಡೆಯಲಾಗದ ಸ್ಥಿತಿಯಲ್ಲಿ ಪಾಳುಬಿದ್ದ ಗುಡಿಸಲಿನಂತಹ ಮನೆಯಲ್ಲಿ ಈ ಕುಟುಂಬ ದಿನ ಕಳೆಯುತ್ತಿದೆ.
ಕುಟುಂಬದ ಹಿರಿಯ ಮಹಿಳೆ ಗಿರಿಜ ಆಚಾರ್ತಿ(70) ಅವರಿಗೆ ಇಬ್ಬರು ಮಕ್ಕಳು. ಅವರ ಪತಿ ಬದುಕಿದ್ದಾಗ ಬಡತನವಿತ್ತು. ಆದರೆ ಎಲ್ಲವೂ ಸರಿ ಇತ್ತು. ಗಂಡನ ಸಾವಿನ ಬಳಿಕ ಕುಟುಂಬದ ಹೊಣೆ ಹೆಗಲ ಮೇಲೆ ಬಿತ್ತು. ಕೂಲಿ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ.
ಮಗ ಅಂಗವಿಕಲ, ಮಗಳಿಗೆ ಅನಾರೋಗ್ಯ: ಇನ್ನು ಕುಟುಂಬಕ್ಕೆ ಆಧಾರ ಆಗಬೇಕಿದ್ದ ಪುತ್ರ ಕೃಷ್ಣಪ್ಪ ಆಚಾರ್ಯ (37) ಹುಟ್ಟು ಅಂಗವಿಕಲ, ಕೊಕ್ಕೆ ಕಟ್ಟಿರುವಂಥ ಸ್ಥಿತಿಯಲ್ಲಿರುವ ಇವರ ಬೆರಳುಗಳು ದೊಡ್ಡ ಕೆಲಸಗಳನ್ನು ಮಾಡಲು ಸ್ಪಂದಿಸುತ್ತಿಲ್ಲ. ಮರದ ಮಿಲ್‌ನಲ್ಲಿ ಕೆಲಸಕ್ಕಿದ್ದ ಇವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಅವರು ಕೂಡ ದೈಹಿಕವಾಗಿ ಕೃಷರಾಗುತ್ತಾ ನೋವಿನ ಬಾಧೆಯಿಂದ ಕಂಗೆಟ್ಟಿದ್ದಾರೆ. ಪುತ್ರಿ ಬೇಬಿ (32) ಬೀಡಿ ಲೇಬಲ್ ಕೆಲಸ ಮಾಡುತ್ತಿದ್ದರು.
  ಆರ್ಥಿಕವಾಗಿ ಕುಟುಂಬಕ್ಕೆ ಆಧಾರದಂತಿದ್ದ ಇವರೂ ಎರಡು ವರ್ಷದ ಹಿಂದೆ ಹೃದಯ ಕಾಯಿಲೆಗೆ ತುತ್ತಾದವರು ಇನ್ನೂ ಚೇತರಿಸಿಕೊಂಡಿಲ್ಲ.
ಬೇಬಿ ಅವರ ಹೃದಯ ಶಸ್ತ್ರಚಿಕಿತ್ಸೆಗೆ ಬೀಡಿ ಪಾಸ್ ಪಾಸ್ ಪುಸ್ತಕದ ಮೂಲಕ ಪಡೆದ ಆರ್ಥಿಕ ನೆರವಿನಿಂದ ವೆಚ್ಚ ಭರಿಸಲಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ಪಾರ್ಶ್ವವಾಯು: ಬೇಬಿ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಅದರ ಬಳಿಕ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಈಗ ಅವರನ್ನು ಎತ್ತಿಕೊಂಡು ಹೋಗಲು ಒಬ್ಬರು ವ್ಯಕ್ತಿ ಬೇಕು ಎಂಬ ಸ್ಥಿತಿಗೆ ಮುಟ್ಟಿದ್ದಾರೆ. ಹಾಗಾಗಿ ಅಣ್ಣ ತನ್ನ ನೋವಿನ ಮಧ್ಯೆಯೂ ರಾತ್ರಿ ಹಗಲು ತಂಗಿಯ ಸೇವೆ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ತಂಗಿಗೆ ಇಲ್ಲಿ ಅಣ್ಣನೇ ಆಧಾರ. ಗಿರಿಜಾ ಆಚಾರ್ತಿ ಕೂಡ ನರದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲ ನೋವುಗಳ ಸರಮಾಲೆಯಲ್ಲೇ ಕಷ್ಟದಲ್ಲಿ ದಿನದೂಡುತ್ತಿರುವ ಈ ಕುಟುಂಬದಲ್ಲಿ ಪ್ರತಿಯೊಬ್ಬರೂ ಪರರನ್ನೇ ಆಶ್ರಯಿಸಿಕೊಂಡಿರುವುದರಿಂದ ನೋವುಗಳೆಲ್ಲ ಇಮ್ಮಡಿಯಾಗಿವೆ.
ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರದಾಡುವ ಸ್ಥಿತಿಯ ಮಧ್ಯೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಣೆಮಂಗಳೂರು ಒಕ್ಕೂಟದ ಸದಸ್ಯರಾಗಿದ್ದ ಮಹಿಳೆಗೆ ಯೋಜನೆ ವತಿಯಿಂದ ತಿಂಗಳಿಗೆ ರು. 500 ಮಾಸಾಶನ ಕುಟುಂಬದ ನಿರ್ವಹಣೆಗೆ ನೀಡಲಾಗುತ್ತಿದೆ. ಬೇಬಿಗೆ ಹೃದಯ ಚಿಕಿತ್ಸೆಗೆ ಬಂಟ್ವಾಳ ರೋಟರಿ ಕ್ಲಬ್ ಹಾಗೂ ಸಾಮಾಜಿಕ ಕಾರ್ಯಕರ್ತ ನರಿಕೊಂಬು ನಿವಾಸಿ ಪ್ರಕಾಶ್ ಕಾರಂತ್ ಒಂದಷ್ಟು ನೆರವು ನೀಡಿದ್ದಾರೆ.
ಸ್ಥಳೀಯರಾದ ಮಹಮ್ಮದ್ ಹಾಗೂ ಉಮ್ಮರಬ್ಬ ಈ ಕುಟುಂಬಕ್ಕೆ ಕೈಲಾದ ನೆರವನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಮಾನಸಿಕವಾಗಿ ತೀವ್ರ ನೊಂದಿರುವ ಈ ಕುಟುಂಬಕ್ಕೆ ಧೈರ್ಯ ಹೇಳುವವರು ಮುಂದೆ ಬರಬೇಕಾಗಿದೆ.
 ದಾನಿಗಳು ಕೃಷ್ಣಪ್ಪ ಆಚಾರ್ಯ ಅವರ ಪಾಣೆಮಂಗಳೂರು ಕಾರ್ಪೊರೇಶನ್ ಬ್ಯಾಂಕ್ ಖಾತೆ ಸಂಖ್ಯೆ 01006728, ಐಎಫ್‌ಎಸ್‌ಸಿ ಕೋಡ್ ಈಕಖಕಿ 0000200 ಗೆ ಉದಾರ ನೆರವು ನೀಡಬಹುದು.  


7ರಂದು ವಿದ್ಯುತ್ ಇಲ್ಲ
ಮಂಗಳೂರು: ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಡುಪಿ, ಉದ್ಯಾವರ ಮತ್ತು ಚಿಟ್ಪಾಡಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 7ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಕುಂಜಿಬೆಟ್ಟು, ಚಿಟ್ಪಾಡಿ, ಕೃಷ್ಣಮಠ ಸುತ್ತಮುತ್ತ, ಒಳಕಾಡು, ಕೊಳಂಬೆ, ಶಾಂತಿನಗರ, ಮಿಶನ್ ಕಾಂಪೌಂಡ್, ಕೋರ್ಟ್ ರಸ್ತೆ, ಕಿನ್ನಿಮೂಲ್ಕಿ, ಕೆ.ಎಂ. ಮಾರ್ಗ, ಮಾರುತಿ ವೀಥಿಕಾ, ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement