3ಡಿ ಪ್ರಿಂಟರ್ ತಂತ್ರಜ್ಞಾನ ಆವಿಷ್ಕಾರ
ಉಡುಪಿ: ಸುಮಾರು 30 ಸೆಂಟಿ ಮೀಟರ್ ಉದ್ದಗಲದ ಯಾವುದೇ ವಸ್ತುವನ್ನು ಅತ್ಯಂತ ನಿಖರವಾದ ಆಕಾರ, ಅಳತೆಯಲ್ಲಿ ತಯಾರಿಸಬಲ್ಲ 3ಡಿ ಪ್ರಿಂಟರ್ ಎಂಬ ತಂತ್ರಜ್ಞಾನವನ್ನು ಮೂಡುಬಿದರೆಯ ಎಂ.ಐ.ಟಿ.ಎ. ಎಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.
ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮನೀಷ್ ಮತ್ತು ಶ್ರೇಯಶ್ ಕುಡ್ವ ಅವರು ಈ ತಂತ್ರಜ್ಞಾನವನ್ನು ಪ್ರಾಥಮಿಕವಾಗಿ ಆವಿಷ್ಕರಿಸಿದ್ದು, ಇದೀಗ ಅವರು ಎಂಜಿನಿಯರ್ ಗೆಳಯರೊಂದಿಗೆ ಸೇರಿ ಗ್ಲೋಬಲ್ 2ಡಿ ಲ್ಯಾಬ್ ಎಂಬ ಸಂಸ್ಥೆಯನ್ನು ಆರಂಭಿಸಿ 10 ತಿಂಗಳ ನಿರಂತರ ಸಂಶೋಧನೆಯ ನಂತರ ಈಗ ಅಂತಿಮವಾಗಿ ಪ್ರಮಾಣ್ ಎಂಬ ಹೆಸರಿನಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಸುಮಾರು 75 ಸಾವಿರ ವೆಚ್ಚ ತಗಲಿದೆ ಎಂದು ಸಂಶೋಧಕರಲ್ಲೊಬ್ಬರಾದ ಧೀರಜ್ ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ವಿದೇಶಗಳಲ್ಲಿ ಈ ಯಂತ್ರ ಈಗಾಗಲೇ ಚಾಲ್ತಿಯಲ್ಲಿದ್ದರೂ, ಇಷ್ಟು ದೊಡ್ಡ ಗಾತ್ರದ ವಸ್ತು ನಿರ್ಮಾಣ ಮಾಡುವ ತಂತ್ರಜ್ಞಾನ ಆವಿಷ್ಕರಿಸಿದ್ದು ವಿಶ್ವದಲ್ಲಿಯೇ ಇದೇ ಪ್ರಥಮ ಎಂದವರು ಹೇಳಿದರು.
ಪ್ರಸ್ತುತ ಪಾಲಿ ಲ್ಯಾಕ್ಟಿಕ್ ಆ್ಯಸಿಡ್ ಎಂಬ ಪ್ಲಾಸ್ಟಿಕ್ನಂತಹ ಕಚ್ಚಾವಸ್ತುವನ್ನು ಬಳಸಿ ವೈವಿಧ್ಯಮಯ ಆಟದ ಸಾಮಾನುಗಳು, ಯಂತ್ರಗಳ ಬಿಡಿ ಭಾಗ, ಕೀ ಚೈನು ಇತ್ಯಾದಿಗಳನ್ನು ನಿರ್ಮಿಸಲಾಗುತ್ತಿದೆ. ಬೇರೆ ಬೇರೆ ಲೋಹವನ್ನು ಕಚ್ಚಾವಸ್ತುವನ್ನಾಗಿ ಬಳಸಿಯೂ ಅಗತ್ಯ ವಸ್ತುಗಳನ್ನು ಇದರಲ್ಲಿ ನಿರ್ಮಿಸಬಹುದಾಗಿದೆ ಎಂದು ನಾಯಕ್ ವಿವರಿಸಿದರು. ಯಾವುದೇ ವಸ್ತುವಿನ 3ಡಿ (3 ಆಯಾಮ) ಚಿತ್ರವನ್ನು ಈ ಯಂತ್ರಕ್ಕೆ ನೀಡಿದರೆ ಕಚ್ಚಾ ವಸ್ತುವಿನ ಅತ್ಯಂತ ತೆಳು ಎಳೆಗಳನ್ನು ಪದರ ಪದರವಾಗಿ ಅಂಟಿಸುತ್ತಾ ಆ ವಸ್ತುವನ್ನು ಯಥಾವತ್ ನಿರ್ಮಿಸುತ್ತದೆ. ಮತ್ತು ಆ ಚಿತ್ರದ ನಿರ್ಮಾಣದ ಪ್ರತಿಯೊಂದು ಹಂತವೂ, ವಿವಿರಗಳು, ಕಚ್ಚಾ ವಸ್ತುವಿನ ಉಷ್ಣಾಂಶ ಇತ್ಯಾದಿ ವಿವರಗಳು ಯಂತ್ರದಲ್ಲಿರುವ ಪರದೆಯಲ್ಲಿ (ವಿಶ್ವದ 11 ಭಾಷೆಯಲ್ಲಿ) ಮೂಡುತ್ತದೆ.
ವೈದ್ಯಕೀಯ ಕ್ಷೇತ್ರದ ದಂತ, ಎಲುಬು ವಿಭಾಗಗಳಲ್ಲಿ ಕೃತಕ ಗಟ್ಟಿ ಅವಯವಗಳನ್ನು, ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್ ಕ್ಷೇತ್ರದಲ್ಲಿ ಬಿಡಿಭಾಗಗಳನ್ನು ರಚಿಸಲು ಈ ಯಂತ್ರ ಬಳಕೆಯಾಗುತ್ತದೆ. ಪ್ರಸ್ತುತ ತಮ್ಮ ಯಂತ್ರದಲ್ಲಿ 30 ಸೆ.ಮಿ. ಉದ್ದಗಲದ ವಸ್ತು ನಿರ್ಮಿಸಬಹುದಾಗಿದೆ. ಮುಂದೆ ಅಗತ್ಯಕ್ಕೆ ತಕ್ಕಂತೆ ದೊಡ್ಡ ಗಾತ್ರದ ವಸ್ತುಗಳ ಉತ್ಪಾದನೆಯ ಯಂತ್ರಗಳನ್ನೂ ನಿರ್ಮಿಸಬಹುದು ಎನ್ನುತ್ತಾರೆ ಅವರು.
ದಂತ ವೈದ್ಯಕೀಯ ಕ್ಷೇತ್ರದ ಆವಯವ ರಚನೆಗೆ ತಾವು ಪೆಟೇಂಟ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಸಿಗುವ ಹಂತದಲ್ಲಿದೆ ಎಂದೂ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನೀಷ್, ಶ್ರೇಯಸ್, ಮನ್ರಾಜ್ ಇದ್ದರು.