334 ಆನೆಕಾಲು ಪ್ರಕರಣ ಪತ್ತೆ
ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಆನೆಕಾಲು ಸೋಂಕಿನ 334 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್ ಕುಮಾರ್ ಅವರು ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ 12ರಂದು ಜಿಲ್ಲೆಯಲ್ಲಿ ನಡೆಯಲಿರುವ ಸಾಮೂಹಿಕ ಡಿಇಸಿ ಮಾತ್ರೆ ಸೇವನೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕುಮಟಾ, ಗೋಕರ್ಣ, ಭಟ್ಕಳ ನಗರ ಮತ್ತು ಶಿರಾಲಿಯಲ್ಲಿ ಆನೆಕಾಲು ರೋಗದ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ಎರಡು ಫೈಲೇರಿಯಾ ಚಿಕಿತ್ಸಾ ಕೇಂದ್ರಗಳಿದ್ದು, ನಿಯಮಿತವಾಗಿ ಫೈಲೇರಿಯಾ ಪ್ರಕರಣಗಳ ತಪಾಸಣೆ ನಡೆಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಫೈಲೇರಿಯಾ ರೋಗ ಲಕ್ಷಣಗಳು ಪತ್ತೆ ಆದಾಗ ಚಿಕಿತ್ಸೆ ನೀಡಿದರೆ ಅದನ್ನು ನಿಯಂತ್ರಿಸಲು ಸಾಧ್ಯವಿದೆ. ರೋಗ ಹರಡಿದ ಬಳಿಕ ಅದನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಡಿಇಸಿ ಮಾತ್ರೆ ಸೇವನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
3080 ಕಾರ್ಯಕರ್ತರ ನೇಮಕ: ಆನೆಕಾಲು ರೋಗದಿಂದ ಪಾರಾಗಲು ಪ್ರತಿಯೊಬ್ಬರಿಗೂ ಡಿಇಸಿ ಮಾತ್ರೆಗಳನ್ನು ಒದಗಿಸಲು ಫೆಬ್ರವರಿ 12ರಂದು ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 3080 ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದರು.
ರೋಗ ಹೇಗೆ ಹರಡುತ್ತದೆ: ಕೊಳಚೆ ನೀರಿನಲ್ಲಿ ಹುಟ್ಟುವ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಮೈಕ್ರೋಫೈಲೇರಿಯಾ ಸೋಂಕು ಇರುವ ವ್ಯಕ್ತಿಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಎರಡು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು, ಅತಿ ವೃದ್ಧಾಪ್ಯದಲ್ಲಿರುವವರು, ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವವರು ಈ ಮಾತ್ರೆಯನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಈ ಮಾತ್ರೆಯನ್ನು ಸೇವಿಸಬಾರದು. ಪ್ರತಿಯೊಬ್ಬರೂ ಈ ಗುಳಿಗೆಯನ್ನು ಸೇವಿಸಿದಾಗ, ಆ ಪ್ರದೇಶದಲ್ಲಿರುವ ಮೈಕ್ರೋಫೈಲೇರಿಯಾ ಜಂತುಗಳ ಸೋಂಕು ಸಂಪೂರ್ಣವಾಗಿ ನಾಶಹೊಂದಿ, ಸೊಳ್ಳೆಗಳಿಗೆ ಸೋಂಕು ಹರಡಲು ಅವಕಾಶ ಆಗುವುದಿಲ್ಲ ಎಂದು ಅವರು ತಿಳಿಸಿದರು.
ರೋಗದ ಲಕ್ಷಣ: ಈ ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಆಗಾಗ್ಗೆ, ತೀವ್ರತರ ಊತಕ್ಕೆ ಒಳಗಾದ ಲಿಂಫ್ನಾಳಗಳ ಭಾಗಗಳು ಕೆಂಪಾಗುವುದು, ತೀವ್ರವಾದ ಜ್ವರದಿಂದ ಬಳಲುವುದು, ನೋವಿನಿಂದ ನರಳುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು. ಸೋಂಕು ಉಂಟಾಗಿ ಕಾಲುಗಳ ಊತ, ಲಿಂಫ್ ನಾಳಗಳ ಊತ, ವೃಷಣ ಬಾವು ಕಾಣಿಸಿಕೊಳ್ಳುವುದು.
ಸೋಂಕು ಹೊಂದಿದ ವ್ಯಕ್ತಿಗೆ ಕಚ್ಚಿದ ಸೊಳ್ಳೆಯ ಮೂಲಕ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ಅವರು ಹೇಳಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸುಭಾಷ್ ತಾಂಡೇಲ್ ಅವರು ಫೈಲೇರಿಯಾ ರೋಗದ ಕುರಿತು ಮಾಹಿತಿ ಒದಗಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.