ಕೋಡಿಬಾಗದಲ್ಲಿ ಹೆಂಜಾ ನಾಯ್ಕ ಪುತ್ಥಳಿ ಸ್ಥಾಪನೆ
ಕಾರವಾರ: ನಗರಸಭೆ ಉದ್ಯಾನದಲ್ಲಿ ಸರ್ಕಾರದಿಂದ ಹೆಂಜಾ ನಾಯ್ಕ ಪುತ್ಥಳಿ ಸ್ಥಾಪನೆಯಾಗಿದ್ದಂತೂ ಹೌದು. ಆದರೆ ಈಗ ಅಖಿಲ ಕೋಮಾರಪಂತ ಸಂಘ ಹಾಗೂ ಹೆಂಜಾ ನಾಯ್ಕ ಸ್ಮಾರಕ ಅಭಿವೃದ್ಧಿ ಸಮಿತಿ ಹೆಂಜಾ ನಾಯ್ಕ ಸ್ಮಾರಕ ಇರುವ ಕೋಡಿಬಾಗದಲ್ಲಿ ಫೆ. 17ರಂದು ಪುತ್ಥಳಿ ಸ್ಥಾಪಿಸಲಿದೆ. ಕೋಮಾರಪಂತ ಸಂಘದ ಪ್ರಮುಖ ಪ್ರಭಾಕರ ಮಾಳ್ಸೇಕರ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಅಂದು ಬೆಳಗ್ಗೆ 10 ಗಂಟೆಗೆ ಪ್ರತಿಮೆ ಅನಾವರಣ ನಡೆಯಲಿದೆ. ಇದಕ್ಕೂ ಮುನ್ನ ಹೂವಿನ ಚೌಕದಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸ್ವಾಮಿ ಭವೇಶಾನಂದ ಪುತ್ಥಳಿ ಅನಾವರಣಗೊಳಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ನೌಕಾನೆಲೆಯ ಕಮಾಂಡರ್ ವಿನಯಭೂಷಣ ನಾಯ್ಕ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಮೋಹನ ಎಸ್. ನಾಯ್ಕ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಭವಿಷ್ಯದಲ್ಲಿ ಹೆಂಜಾ ನಾಯ್ಕ ಕುರಿತ ದಾಖಲೆಗಳನ್ನು ಸಂಗ್ರಹಿಸುವ ಹಾಗೂ ಸ್ಮಾರಕ ಅಭಿವೃದ್ಧಿ ಪಡಿಸುವ ಯೋಜನೆಗಳಿವೆ ಎಂದು ಅವರು ಹೇಳಿದರು. ಪ್ರಮುಖರಾದ ಎಂ.ಆರ್. ನಾಯ್ಕ, ಮಾಧವ ನಾಯ್ಕ, ಎಸ್.ಎಸ್.ನಾಯ್ಕ, ಮಾರುತಿ ನಾಯ್ಕ ಮತ್ತಿತರರು ಇದ್ದರು.
ನಾಳೆ ಯಕ್ಷಗಾನ
ಯಲ್ಲಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ವನಸಿರಿ ಕಲಾ ಕೂಟ ಚಿಮ್ನಳ್ಳಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಬಾಗಿನಕಟ್ಟಾ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಆವಾರ ಬಾಗಿನಕಟ್ಟಾದಲ್ಲಿ ನಾಗಪ್ಪಾ ಸಿದ್ದಿ ಸಂಗಡಿಗರಿಂದ ಸಂಗ್ಯಾ-ಬಾಳ್ಯ ಯಕ್ಷಗಾನ ಫೆ. 9ರಂದು ರಾತ್ರಿ 8ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ವಿ.ಎನ್. ಭಟ್ಟ ನೆಡಿಗೆಮನೆ ಉದ್ಘಾಟಿಸುವರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಆರ್.ಎಂ. ಭಟ್ಟ ಬಾಗಿನಕಟ್ಟಾ, ಮಹಾಬಲೇಶ್ವರ ಭಾಗ್ವತ ಪಾಲ್ಗೊಳ್ಳಲಿದ್ದಾರೆ.
10ರಂದು ನಾಟಕ ಪ್ರದರ್ಶನ
ಯಲ್ಲಾಪುರ: ತಾಲೂಕಿನ ಚಿಮ್ನಳ್ಳಿಯ ವನಸಿರಿ ಕಲಾ ಕೂಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಫೆ. 10ರಂದು ರಾತ್ರಿ 8 ಘಂಟೆಗೆ ಚಿಮ್ನಳ್ಳಿಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಬೆಳ್ಳಿ ಮಠದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿದೆ. ಗ್ರಾಪಂ ಅಧ್ಯಕ್ಷೆ ದೀಪಾ ಕುರ್ಡೇಕರ್ ಉದ್ಘಾಟಿಸಲಿದ್ದು, ಬೆಳ್ಳಿಮಠದ ಅಧ್ಯಕ್ಷ ಜಿ.ಎನ್. ಭಟ್ಟ ಭಟ್ರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಜಿ.ಆರ್. ಭಾಗ್ವತ ತಾರಿಕುಂಟೆ, ಲಕ್ಷ್ಮಿ ಸಿದ್ದಿ ಪಾಲ್ಗೊಳ್ಳಲಿದ್ದಾರೆ. ಶಿವಾನಂದ ಸಿದ್ದಿ, ನಾಗೇಂದ್ರ ಸಿದ್ದಿ, ನಾರಾಯಣ ಸಿದ್ದಿ, ಧನಂಜಯ ಸಿದ್ದಿ, ನಾರಾಯಣ ಬಿ. ಸಿದ್ದಿ ಹಾಗೂ ಸಂಗಡಿಗರು ನಾಟಕ ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.