ಪ್ರಾಥಮಿಕ ಶಾಲೆ ಕಟ್ಟಡ ಶಂಕುಸ್ಥಾಪನೆಗೆ ಆಕ್ರೋಶ
ಯಲ್ಲಾಪುರ: ಪ್ರೌಢಶಾಲೆಗೆ ಕಾದಿಟ್ಟ ಸ್ಥಳದಲ್ಲಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದು, ಈರಾಪುರಕ್ಕೆ ಪ್ರತ್ಯೇಕ ಬಸ್ ಬೇಡಿಕೆ, ವಿದ್ಯುತ್ ತಂತಿ ಜೋತು ಬಿದ್ದರೂ ಹೆಸ್ಕಾಂ ನಿರ್ಲಕ್ಷ್ಯ ಇತ್ಯಾದಿ ಸಂಗತಿಗಳ ಕುರಿತು ಇತ್ತೀಚೆಗೆ ಕಳಚೆಯಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು.
ಸಭೆಯಲ್ಲಿ ವಿವಿಧ ಜನಪ್ರತಿನಿಧಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ವಿವಿಧ ಇಲಾಖೆಗಳು ತಮ್ಮ ವರದಿಯನ್ನು ಮಂಡಿಸತೊಡಗಿದಾಗ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು. ತೋಟಗಾರಿಕಾ ಇಲಾಖೆ ಹಲವು ರೈತರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿದ ಪರಿಣಾಮ ಈಗ ರೈತರಿಗೆ ಸರ್ಕಾರದ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲವೆಂದು ಸಾರ್ವಜನಿಕರು ತಿಳಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕಾ ಇಲಾಖೆ ಅಧಿಕಾರಿ ತಪಾಸಣೆಯ ವರದಿಯನ್ನು ಅನುಸರಿಸಿ ಪಟ್ಟಿ ತಯಾರಿಸಲಾಗಿದ್ದು, ನಿಯಮದಂತೆ 3 ವರ್ಷದವರೆಗೆ ಕಪ್ಪುಪಟ್ಟಿಗೆ ಸೇರಿದ ರೈತರಿಗೆ ಯಾವುದೇ ಯೋಜನೆಯ ಫಲಾನುಭವಿಯಾಗಲು ಸಾಧ್ಯವಿಲ್ಲವೆಂದು ಪುನರುಚ್ಚರಿಸಿದರು.
ರಾಜಕೀಯ ಪ್ರೇರಿತ: ಕಳಚೆಯಲ್ಲಿ ಪ್ರೌಢಶಾಲೆ ಕಟ್ಟಡ ನಿರ್ಮಿಸಲು ಸ್ಥಳೀಯರು ಖರೀದಿಸಿದ ಸ್ಥಳದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗೆ ಶಿಕ್ಷಣ ಸಚಿವರು ಶಂಕುಸ್ಥಾಪನೆಗೈದಿದ್ದನ್ನು ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಜಿ.ಎಂ. ಹೆಗಡೆ ಖಂಡಿಸಿದರು.
ಎರಡು ವರ್ಷಗಳ ಹಿಂದೆ ಇಲ್ಲಿ ಮಂಜೂರಿಯಾದ ಮುಖ್ಯಾಧ್ಯಾಪಕರ ಕೊಠಡಿಯನ್ನು ಬೇರೆಡೆ ಸ್ಥಳಾಂತರಿಸಿದ ಇಲಾಖೆಯ ಕ್ರಮ ರಾಜಕೀಯ ಪ್ರೇರಿತವೆಂದು ಆರೋಪಿಸಿದರು. ಹತ್ತಿರದ ಈರಾಪುರಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆಯಾಗಬೇಕೆಂದು ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದರು. ತಾಲೂಕಿನಾದ್ಯಂತ ವಿದ್ಯುತ್ ತಂತಿ ಹಳೆಯದಾಗಿ ತುಕ್ಕು ಹಿಡಿದು ಹರಿದು ಬೀಳುತ್ತಿದ್ದರೂ ಹೆಸ್ಕಾಂ ಹೊಸ ತಂತಿ ಅಳವಡಿಸಲು ಮುಂದಾಗದಿರುವ ಬಗ್ಗೆ ಸ್ಥಳೀಯರಾದ ಗೋಪಾಲ ಭಟ್ಟ, ಶಿವರಾಮ ಹೆಗಡೆ, ಆರ್.ಎಸ್. ಭಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗನೆ ತಂತಿಯನ್ನು ಬದಲಾಯಿಸಿಕೊಡುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು. ತಾಪಂ ಅಧ್ಯಕ್ಷೆ ಲಕ್ಷ್ಮೀ ನಾಯ್ಕ, ಉಪಾಧ್ಯಕ್ಷ ಶಂಕರ ಕಣ್ಣಿ, ಉಪ ತಹಸೀಲ್ದಾರ್ ಪಿಂಟೋ, ಗ್ರಾಪಂ ಸದಸ್ಯರಾದ ಗಜಾನನ ಭಟ್ಟ, ರಾಮಕೃಷ್ಣ ಗೌಡ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಜಿ.ಎಸ್. ಪತ್ರೇಕರ ಸ್ವಾಗತಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.