ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ
ಯಲ್ಲಾಪುರ: ಯುವ ಜನಾಂಗ ಇಂದು ಕೃಷಿಯಿಂದ ವಿಮುಖರಾಗುತ್ತಿದ್ದು, ಹೀಗೆ ಮುಂದುವರೆದರೆ ವ್ಯವಸ್ಥೆಯೇ ಬುಡಮೇಲಾದಿತು ಎಂದು ವೈಟಿಎಸ್ಎಸ್ ಕಾಲೇಜು ಪ್ರಾಚಾರ್ಯ ಶ್ರೀರಂಗ ಕಟ್ಟಿ ಹೇಳಿದರು.
ಅವರು ವೈಟಿಎಸ್ಎಸ್ ಸಭಾಭವನದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪ್ರತಿಷ್ಠಾನ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ವಿಭಾಗಕ್ಕೆ ಕೃಷಿ ರಸಪ್ರಶ್ನೆ ನಡೆಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಣದಿಂದಲೇ ಎಲ್ಲವೂ ದೊರೆಯುತ್ತದೆ, ನೆಮ್ಮದಿ ಸಿಗುತ್ತದೆ ಎಂಬ ಭ್ರಮೆಯಿಂದ ನಾವು ಹೊರ ಬರಬೇಕಾಗಿದೆ. ಕೃಷಿ ಎಂದರೆ ಹೆಚ್ಚಿನ ಆದಾಯ ಬಾರದು. ಆದ್ದರಿಂದ ಕೃಷಿ ಬೇಡವೆಂಬ ಚಿಂತನೆ ತುಂಬಾ ಅಪಾಯಕಾರಿ ಎಂಬುದನ್ನು ಗಮನಿಸಿದ ಸ್ವರ್ಣವಲ್ಲೀ ಶ್ರೀಗಳ ಇಂದಿನ ಯುವ ಜನಾಂಗಕ್ಕೆ ಕೃಷಿಯ ಕುರಿತು ಜ್ಞಾನ, ಅಗತ್ಯತೆ ಎಂಬುದನ್ನು ಅರಿತು ಕೃಷಿ ಜಯಂತಿಯನ್ನು ಆಚರಿಸುತ್ತ ಬಂದಿದ್ದರು. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ಮೂಡಿಸುವಂತಹ ಈ ಕೃಷಿ ರಸಪ್ರಶ್ನೆ ಅಭಿನಂದನಾರ್ಹವಾದದ್ದು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ ಹೆಗಡೆ, ಅರಣ್ಯ ಕಾಲೇಜಿನ ಉಪನ್ಯಾಸಕ ನಾಗರಾಜ ಹೆಗಡೆ, ಶಿಕ್ಷಕ ಡಿ.ಪಿ. ಹೆಗಡೆ, ವಿ.ಟಿ. ಹೆಗಡೆ ಮತ್ತು ಆದಿತ್ಯ ವಿನಯ ಹಾಗೂ ಶಾರದಾಂಬಾ ದೇವಸ್ಥಾನದ ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ಉಪಸ್ಥಿತರಿದ್ದರು. ಸಂಘಟನೆ ಸಂಯೋಜಕರಾದ ಶ್ರೀಪಾದ ಹೆಗಡೆ ಹೊಸ್ತೋಟ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ರತ್ನಾಕರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ದಶರಥ ದೊಡ್ಮನೆ ಸ್ವಾಗತಿಸಿದರು. ವೈಟಿಎಸ್ಎಸ್ ಶಿಕ್ಷಕ ಕೆ.ಶಿ. ಮಾಳಕರ್ ನಿರ್ವಹಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.