ಪುರ ಪ್ರವೇಶಿದ ಮಾಣಿಕ್ಯಕೀರ್ತಿ ಶ್ರೀ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 11
ಇತಿಹಾಸ ಪ್ರಸಿದ್ಧ ಸ್ವಾದಿ ದಿಗಂಬರ ಜೈನ ಮಠಕ್ಕೆ ಅಭಿನವ ಸ್ವಾಮೀಜಿಗಳಾದ ಮಾಣಿಕ್ಯಕೀರ್ತಿ ಸ್ವಾಮೀಜಿಗಳು ಸೋಮವಾರ ಆಗಮಿಸಿದರು. ಪೂರ್ಣ ಕುಂಭ, ಡೊಳ್ಳು ನೃತ್ಯದೊಂದಿಗೆ ಅಭಿನವ ಸ್ವಾಮೀಜಿಗಳನ್ನು ಪುರ ಪ್ರವೇಶಕ್ಕೆ ಸ್ವಾಗತಿಸಲಾಯಿತು.
ಶ್ರವಣಬೆಳಗೊಳದ ಚಾರುಕೀರ್ತಿ ಶ್ರೀಗಳ ಬಳಿ ಕ್ಷುಲ್ಲಕ ದೀಕ್ಷೆಯನ್ನು ಪಡೆದು ಹೊಂಬುಜ ಜೈನ ಮಠದಲ್ಲಿ ವಾಸ್ತವ್ಯ ಮಾಡಿದ್ದ ಮಾಣಿಕ್ಯ ಕೀರ್ತಿ ಸ್ವಾಮೀಜಿಗಳು ಸೋಮವಾರ ಮಧ್ಯಾಹ್ನ 1ಕ್ಕೆ ಸ್ವಾದಿ ಜೈನಮಠದ ಬಳಿಯ ಮುತ್ತಿನ ಕೆರೆ ಸ್ವಾಗತ ಕಮಾನಿನ ಬಳಿ ಆಗಮಿಸಿದರು. ತಮಿಳುನಾಡಿನ ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಪಾದಕ್ಕೆರಗಿ ಮಠದ ಕಡೆಗೆ ಹೆಜ್ಜೆ ಹಾಕಿದ ಶ್ರೀಗಳನ್ನು ಪಟ್ಟಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ದತ್ತಾ ಡೋರ್ಲೆ, ಮಠದ ಪಟ್ಟದ ಪುರೋಹಿತ ಬಿ.ಪಿ. ಸಿದ್ಧಾರ್ಥ ಇಂದ್ರ, ಸಮಿತಿ ಕೋಶಾಧ್ಯಕ್ಷ ಮಹಾವೀರ ದಾನೊಳ್ಳಿ ಬರಮಾಡಿಕೊಂಡರು.
ಗಮನಸೆಳೆದ ಪೇಟ: ನೂತನ ಯತಿವರೇಣ್ಯರನ್ನು ಪೂರ್ಣಕುಂಭದ ಜೊತೆಗೆ ಕಂಸಾಳೆ ನೃತ್ಯ, ಡೊಳ್ಳು ಕುಣಿತ, ವಾದ್ಯಗಳ ಮೆರವಣಿಗೆ ಮೂಲಕ ಮಠಕ್ಕೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯದಲ್ಲಿ ಅವರು ಮುತ್ತಿನಕೆರೆಯ ಆಧಿನಾಥ ತೀರ್ಥ, ಆದಿನಾಥ ಸ್ವಾಮೀಜಿ, ಕ್ಷೇತ್ರಪಾಲ ದೇವರು ಹಾಗೂ ಪಾರ್ಶ್ವನಾಥ ಬಸದಿಗಳಿಗೆ ಭೇಟಿ ನೀಡಿದರು. ಸ್ವಾದಿ ಮಠಕ್ಕೆ ಆಗಮಿಸಿ ಮಠದ ಅಧಿದೇವತೆಯಾದ ಯಕ್ಷಿ ಕೂಷ್ಮಾಂಡಿನಿ ದೇವಿ ಹಾಗೂ ನೇಮಿನಾಥ ಮೂರ್ತಿಗಳಿಗೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಧವಳಕೀರ್ತಿ ಸ್ವಾಮೀಜಿಗಳ ಸಮ್ಮುಖದಲ್ಲಿ ಮಂಗಳಾರತಿ ಸ್ವೀಕರಿಸಿ, ಕಾಲೈಕ್ಯರಾದ ಭಟ್ಟಾಕಲಂಕ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಸಭಾ ಮಂಟಪಕ್ಕೆ ಆಗಮಿಸಿದ ನೂತನ ಯತಿಗಳು ನೆರೆದಿದ್ದ ಭಕ್ತಸಮೂಹವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಮಾಣಿಕ್ಯ ಕೀರ್ತಿ ಶ್ರೀ ಪುರ ಪ್ರವೇಶದ ಸಂದರ್ಭದಲ್ಲಿ ಜೈನರ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಜೊತೆ ದಕ್ಷಿಣ ಕನ್ನಡದ ಸಂಸ್ಕೃತಿ, ಪರಂಪರೆ ಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು. ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ವಾದ್ಯ ಮೇಳಗಳು, ವಿಶೇಷ ಆಚರಣೆಗಳು ಪುರ ಪ್ರವೇಶದಲ್ಲಿ ಎದ್ದುಕಾಣುತ್ತಿತ್ತು. ದಕ್ಷಿಣ ಕನ್ನಡ ಪ್ರದೇಶದಲ್ಲಿ ಜೈನರು ತೊಡುವ ವಿಶೇಷ ಪೇಟ ಗಮನ ಸೆಳೆಯಿತು.
ನೂತನ ಯತಿಗಳ ಆಶೀರ್ವಚನ: ಸರ್ವಧರ್ಮ ಸಮನ್ವಯ ಸಾಧಿಸುವುದರ ಜೊತೆಗೆ ಧರ್ಮ ರಕ್ಷಣೆ ಮಾಡುವುದು ನಮ್ಮ ಮುಖ್ಯ ಧ್ಯೇಯ. ಧರ್ಮ ರಕ್ಷಣೆಗೆ ಶಿರಸಿ ತಾಲೂಕಿನ ಸಮಸ್ತ ನಾಗರಿಕರ ಸಹಕಾರ ಅಗತ್ಯ ಎಂದು ಮಾಣಿಕ್ಯ ಕೀರ್ತಿ ಸ್ವಾಮೀಜಿಗಳು ಹೇಳಿದರು. ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಸಮಾಜ ಸೇವೆ, ಕ್ಷೇತ್ರ ರಕ್ಷಣೆ ಹಾಗೂ ಅಭಿವೃದ್ಧಿ ಸಲುವಾಗಿ ದೀಕ್ಷೆಯನ್ನು ಪಡೆದಿದ್ದು ಕಾಯಾ-ವಾಚಾ-ಮನಸಾ ತ್ರಿಕರಣ ಶುದ್ಧಿಯಿಂದ ಆತ್ಮಕಲ್ಯಾಣ ಕಾರ್ಯವನ್ನು ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪಟ್ಟಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ದತ್ತಾ ಡೋರ್ಲೆ, ಕೋಶಾಧ್ಯಕ್ಷ ಮಹಾವೀರ ದಾನೊಳ್ಳಿ, ಕಾರ್ಯದರ್ಶಿ ಶಶಿಕಾಂತ ಪಟೇಲ್, ಹುಲೇಕಲ್ ಗ್ರಾಪಂ ಅಧ್ಯಕ್ಷೆ ನಾಗೂಬಾಯಿ ಶೇಟ್, ಗ್ರಾಪಂ ಸದಸ್ಯರುಗಳು, ಶ್ರೀಧರ ಬಸ್ತಿ ಇದ್ದರು. ಮಠದ ಜೀರ್ಣೋದ್ಧಾರ ಕಾರ್ಯ ನಡೆಸುತ್ತಿರುವ ಅಜಿತ್ ಪಾಟೀಲ, ಒಳಾಂಗಣ ನವೀಕರಣ ಮಾಡಿದ ದಿನೇಶ ಕೊಡಚವಾಡಿ ಅವರನ್ನು ಸನ್ಮಾನಿಸಲಾಯಿತು. ಸ್ವಾದಿ ಮಠದಲ್ಲಿ ಪರಂಪರಾನುಗತವಾಗಿ ನೂತನ ಯತಿವರ್ಯರ ಪಟ್ಟಕಟ್ಟುತ್ತ ಬಂದಿರುವ ಸರಸಂಗಮಿ ವಟ್ಟಕ್ಕಿ ಮನೆತನದವರಿಂದ ನೂತನ ಶ್ರೀಗಳಿಗೆ ಫಲ-ಪುಷ್ಪ ಸಮರ್ಪಣೆ ಕಾರ್ಯ ನಡೆಯಿತು.
-ವಿಶ್ವಾಮಿತ್ರ ಹೆಗಡೆ/ವಿನಯ ದಂಟಕಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.