ಹೊಸಾಕುಳಿ ಗ್ರಾಪಂ ವ್ಯಾಪ್ತಿಯಲ್ಲಿ ದಿನಕರ ಶೆಟ್ಟಿ ಗ್ರಾಮ ವಾಸ್ತವ್ಯ
ಹೊನ್ನಾವರ: ತಾಲೂಕಿನ ಹೊಸಾಕುಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ದಿನಕರ ಶೆಟ್ಟಿ ಇವರು ಗ್ರಾಮವಾಸ್ತವ್ಯ ಹಮ್ಮಿಕೊಂಡರು.
ಕುಮಟಾ ವಿಧಾನಸಭಾ ಕ್ಷೇತ್ರದ 21ನೇ ಗ್ರಾಮ ವಾಸ್ತವ್ಯ ಇದಾಗಿದ್ದು ಹೊಸಾಕುಳಿ ಮಕ್ಕಿಯ ದುರ್ಗಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಗ್ರಾಮವಾಸ್ತವ್ಯಕ್ಕೆ ಚಾಲನೆ ನೀಡಿದರು. ನಂತರ ದೇವಸ್ಥಾನದ ಸಭಾಭವನದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಗ್ರಾಮವಾಸ್ತವ್ಯದ ಮೂಲಕ ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿ ನೀಡಬೇಕು. ಆ ಮೂಲಕ ತಮ್ಮ ಕ್ಷೇತ್ರದ ಸಂಪೂರ್ಣ ಪರಿಚಯ ಪಡೆದುಕೊಂಡು ಜನರ ಕಷ್ಟದ ಜೀವನಕ್ರಮಕ್ಕೆ ಸ್ಪಂದಿಸಬೇಕು. ಭವಿಷ್ಯದಲ್ಲಿ ಅವರ ಅಭಿವೃದ್ಧಿಗೆ ಇರುವ ಅಗತ್ಯಗಳೇನು ಎಂದು ತಿಳಿದುಕೊಳ್ಳಬೇಕು. ಜೊತೆಗೆ ಹಿರಿಯ ಜೀವಗಳನ್ನು, ನಾಟಿ ವೈದ್ಯರನ್ನು, ಸಾಧಕರನ್ನು ಗೌರವಿಸುವ ಕೆಲಸ ಮಾಡಬೇಕು. ಅಸಹಾಯಕರಿಗೆ ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಹಕರಿಸಬೇಕು ಎಂಬ ಉದ್ದೇಶಗಳಿಂದ ಗ್ರಾಮವಾಸ್ತವ್ಯ ನಡೆಸುತ್ತಿದ್ದೇನೆ ಎಂದರು.
ಜನಸ್ಪಂದನ: ಈಗಾಗಲೇ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಗ್ರಾಮ ವಾಸ್ತವ್ಯಕ್ಕೆ ಜನಸ್ಪಂದನೆ ದೊರೆತಿದೆ. ಇದು ನನಗೆ ಮತ್ತಷ್ಪು ಹುರುಪು ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಾಹ್ನ ಹಿರೇಮಕ್ಕಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಬಹಿರಂಗ ಸಭೆ ಕೈಗೊಂಡು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಹೊಸಾಕುಳಿಯ ಮಕ್ಕಿ, ಸಾಲ್ಮನೆ, ಗುಡ್ಡೇಬಾಳ, ದೊಡ್ಡಹಿತ್ಲಕೇರಿ,ಅರೇಅಂಗಡಿ, ಜನತಾ ಪ್ಲಾಟ್, ವರ್ನಕೇರಿ ಹೀಗೆ ಪ್ರತಿಗ್ರಾಮಗಳಿಗೆ ಪಾದಯಾತ್ರೆ ಮೂಲಕ ಜನರ ಬಳಿಗೆ ತೆರಳಿದರು. ದೊಡ್ಡಹಿತ್ಲಕೇರಿ ಗ್ರಾಮಸ್ಥರು ದೊಡ್ಡಹಿತ್ಲಕೇರಿ ಹಳ್ಳಕ್ಕೆ ಖಾರ್ಲೆಂಡ್ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಸಮಸ್ಯೆಗಳು ಮನವಿ ರೂಪದಲ್ಲಿ ಹರಿದು ಬಂದವು. ಆಯಾ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಕಂಡ ಸಮಸ್ಯೆಗಳಿಗೆ ಹಾಜರಿದ್ದ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ರಸ್ತೆ, ಗಟಾರ, ಕಾಲುಸಂಕ ಇವೇ ಮುಖ್ಯವಾದ ಸಮಸ್ಯೆಗಳು ಶಾಸಕರು ಹೋದಲ್ಲೆಲ್ಲ್ಲ ಗಮನಕ್ಕೆ ಬಂದವು.
ವಿದ್ಯಾರ್ಥಿಗಳಿಗೆ ಹಣ: ಸಂಜೆ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ರಾತ್ರಿ ವಾಸ್ತವ್ಯ ಮಾಡಿದರು. ಈ ಸಂದರ್ಭದಲ್ಲಿ ನಿಖಿಲ್ ದಿನಕರ ಶೆಟ್ಟಿ ಮೆಮೋರಿಯಲ್ ಸಂಸ್ಥೆ ವತಿಯಿಂದ ಹೊಸಾಕುಳಿ ಪಂಚಾಯಿತಿ ವ್ಯಾಪ್ತಿಯಿಂದ ಕಾಲೇಜಿಗೆ ಹೋಗುತ್ತಿರುವ ಬಸ್ಪಾಸ್ ಹೊಂದಿದ ಎಲ್ಲ ವಿದ್ಯಾರ್ಥಿಗಳಿಗೆ ತಲಾ ರು. 300 ವಿತರಿಸಿದ ಶಾಸಕರ ಶಾಲಾ ಮಕ್ಕಳಿಗೆ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗಣಪಯ್ಯ ಗೌಡ, ಇಡಗುಂಜಿ ದೇವಸ್ಥಾನ ಟ್ರಸ್ಟಿಗಳಾದ ಜಿ.ಜಿ. ಸಭಾಹಿತ್, ಮಾಜಿ ಜಿಪಂ ಸದಸ್ಯ ಸುಹ್ರಹ್ಮಣ್ಯ ಶಾಸ್ತ್ರಿ, ಟಿ.ಎಸ್. ಹೆಗಡೆ, ಆರ್.ಎಂ. ಹೆಗಡೆ, ರಾಜು ಶೆಟ್ಟಿ, ಸುರೇಶ್ ಶೆಟ್ಟಿ, ಉಮೇಶ್ ಭಟ್ಟ, ಜಿ.ಎಸ್. ಹೆಗಡೆ, ಎಂ.ಎಸ್. ಹೆಗಡೆ, ಸುಬ್ರಾಯ ಗೌಡ, ಎಸ್.ವಿ. ನಾಯ್ಕ, ಸುರೇಶ್ ನಾಯ್ಕ, ಕೆ.ಎಸ್. ಗೌಡ, ಪಿ.ಎಸ್. ಭಟ್ಟ ಉಪ್ಪೋಣಿ, ಸುಬ್ಬು ಹೆಗಡೆ, ಶ್ರೀಧರ ಭಟ್ಟ, ಎಸ್.ಆರ್. ಹೆಗಡೆ, ಮುರಳೀಧರ ಹೆಗಡೆ, ವಿಠ್ಠಲ ನಾಯ್ಕ, ದೇವು ಗೌಡ ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.