ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಗೃಹ ಪ್ರವೇಶ: ವಿದ್ಯಾರ್ಥಿಗಳಿಗೆ ಸುತ್ತೋಲೆ

Parashurama
Updated On : 14 Feb 2013, 12:40 pm

ಅಂಕೋಲಾ:  ರಾಜ್ಯ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರು ಅಂಕೋಲಾದ ಪೂಜಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಮನೆ ಗೃಹ ಪ್ರವೇಶದ ಸಂತೋಷ ಕೂಟಕ್ಕೆ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಒತ್ತಾಯ ಪೂರ್ವಕವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಿರುವ ಸಂಗತಿ ತಾಲೂಕಿನೆಲ್ಲಡೆ ತೀವ್ರ ಚರ್ಚೆಗೆ  ಗ್ರಾಸವಾಗಿದೆ.
ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು, ಸಚಿವರ ಅಧ್ವಾನವನ್ನು ವಿವರಿಸಿದರು.
ತರಾಟೆಗೆ: ಗೋಪಾಲಕೃಷ್ಣ ನಾಯಕ, ಕಾಲೇಜು ಪ್ರಾಚಾರ್ಯೆ ವಿದ್ಯಾ ನಾಯಕ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕಾಲೇಜು ಪ್ರಾಚಾರ್ಯೆ, ನಾವೇನೂ ಯಾವ ವಿದ್ಯಾರ್ಥಿಗಳನ್ನೂ ಒತ್ತಾಯಪೂರ್ವಕವಾಗಿ ಸಚಿವರ ಮನೆಗೆ ಕಳುಹಿಸಿಲ್ಲ. ಆದರೆ ಸಚಿವರ ಆಪ್ತ ಕಾರ್ಯದರ್ಶಿ ಪದೇ ಪದೇ ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಒತ್ತಾಯಿಸಿದಾಗ ಸಚಿವರು ಕಾಲೇಜಿನ ಸಿಡಿಸಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ತಾವು ಸುತ್ತೋಲೆ ಹೊರಡಿಸುವ ಮೂಲಕ ವಿದ್ಯಾರ್ಥಿಗಳನ್ನು ಕಳುಹಿಸುವುದು ಅನಿವಾರ್ಯವಾಯಿತು ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಆಡಳಿತ ದುರುಪಯೋಗ: ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೋಪಾಲಕೃಷ್ಣ ನಾಯಕ, ಸಚಿವರು ತಮ್ಮ ಮನೆ ಗೃಹ ಪ್ರವೇಶದ ಸಂತೋಷ ಕೂಟಕ್ಕೆ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಕಾಲೇಜು ವಿದ್ಯಾರ್ಥಿಗಳನ್ನು ಒತ್ತಾಯದ ಪೂರ್ವಕವಾಗಿ ಕರೆಸಿಕೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಚಿವರು ತಮ್ಮ ಅಧಿಕಾರ ಮತ್ತು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದರು.
ಸಚಿವ ಆನಂದ ಅಸ್ನೋಟಿಕರ್ ಅಧಿಕಾರದಲ್ಲಿದ್ದಾಗ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿ ಈಗ ಚುನಾವಣೆ ಸಮೀಪದಲ್ಲಿರುವುದರಿಂದ ತಮ್ಮ ಜನಪ್ರಿಯತೆ ಕ್ಷೀಣವಾಗಿರುವುದರಿಂದ ನೂತನ ಮನೆ ನಿರ್ಮಿಸಿ, ವಾಹನ ವ್ಯವಸ್ಥೆಯನ್ನು ಮಾಡಿದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿದ್ದಾಗ ಕಾಲೇಜುಗಳ ಮೇಲೆ ಒತ್ತಡ ಹೇರಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿರುವುದು ವಿಷಾದನೀಯ. ಇದು ಸಚಿವರು ಅಧಿಕಾರ ಮತ್ತು ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಪಡೆಸಿಕೊಂಡಂತಾಗಿದೆ ಎಂದು ಸಚಿವರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments