ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಪರೋಪಕಾರಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ

Parashurama
Updated On : 14 Feb 2013, 12:40 pm

ನಾವು ಧರ್ಮ ರಕ್ಷಣೆಗೆ ಸಂಕಲ್ಪ ಮಾಡಿದರೆ ಧರ್ಮವೇ ನಮ್ಮನ್ನು ರಕ್ಷಿಸುವ ಕಾರ್ಯ ಮಾಡುತ್ತದೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ದುಃಖ ದೂರ ಮಾಡುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಪರೋಪಕಾರಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ ಎಂದು ಸ್ವಾದಿ ದಿಗಂಬರ ಜೈನ ಮಠದ ನೂತನ ಪಟ್ಟಾಚಾರ್ಯರಾದ ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ನುಡಿದರು.
ಶ್ರೀಗಳ ಪೀಠಾರೋಹಣದ ನಂತರ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಂಸಾರದಲ್ಲಿ ದುಃಖಗಳನ್ನು ದೂರ ಮಾಡಲು ಧರ್ಮ ಮಾರ್ಗವನ್ನು ಅನುಸರಿಸಬೇಕು. ಮಹಾ ಸಾಧಕರು ನಗ್ನ ದಿಗಂಬರ ಮುನಿಗಳಾಗಿ ಸಂಪೂರ್ಣ ಸಂಯಮವನ್ನು ಅಂಗೀಕಾರ ಮಾಡಿ ಮಹಾವ್ರತವನ್ನು ಪಾಲಿಸುತ್ತ ಆತ್ಮನ ಕಲ್ಯಾಣ ಮಾಡಬಹುದಾದರೆ, ನಾವುಗಳು ಶ್ರಾವಕಾವಸ್ಥೆಯಲ್ಲಿದ್ದುಕೊಂಡು ಅಣುರೂಪದಲ್ಲಿ ಅಣುವೃತಗಳನ್ನು ಸ್ವೀಕರಿಸಿ ವ್ರತಾಚರಣೆ ಮಾಡುವುದರ ಜೊತೆಗೆ ಉತ್ತಮ ಗೃಹಸ್ಥನಾಗಿ ಆತ್ಮಕಲ್ಯಾಣವನ್ನು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು.
ಮುಂದಿರುವ ಅಭಿವೃದ್ಧಿ ಮಂತ್ರ?: ಸ್ವಾದಿ ಮಠದ ಆವರಣದಲ್ಲಿ ನಡೆಯಬೇಕಾದ ಕೆಲಸಗಳು ಬಹಳಷ್ಟಿವೆ. ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಪೂಜಾ, ಉತ್ಸವಗಳ ವ್ಯವಸ್ಥೆಗಳನ್ನು ಪ್ರಾಚೀನ ಪರಂಪರೆಯಂತೆ ನೆರವೇರಿಸುವುದು. ಭಕ್ತಾದಿಗಳಿಗೆ ಭೋಜನಾಲಯ, ತ್ಯಾಗಿ ಸೇವೆಗಾಗಿ ಪ್ರತ್ಯೇಕ ವ್ಯವಸ್ಥೆ, ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಪ್ರಾಕೃತ-ಸಂಸ್ಕೃತ ಪಾಠಶಾಲೆ ಮತ್ತು ಗುರುಕುಲ ಸ್ಥಾಪನೆ, ಭಕ್ತಾದಿಗಳಿಗೆ ವಸತಿ ಯೋಜನೆ, ಸಾರ್ವಜನಿಕರ ಹಿತಾಸಕ್ತಿಯ ಯೋಜನೆಗಳಾದ ಆಸ್ಪತ್ರೆ ನಿರ್ಮಾಣ ನಮ್ಮ ಮುಂದಿದೆ. ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ. ಉದ್ಯೋಗ ತರಬೇತಿ ಕೇಂದ್ರಗಳ ಸ್ಥಾಪನೆ. ಊರಿನ ಹಾಗೂ ಸುತ್ತಲಿನ ಗ್ರಾಮಗಳ ಅಭಿವೃದ್ಧಿ ಯೋಜನೆಗೆ ಸಹಕಾರ. ಕನ್ನಡ ನಾಡು-ನುಡಿಯ ಸಾಹಿತ್ಯ ಸೇವೆಗಾಗಿ ವಿಚಾರಗೋಷ್ಠಿ ಹಾಗೂ ಸಮಾವೇಶಗಳ ಆಯೋಜನೆ ಮಾಡಲಾಗುವುದು. ಇವು ಸ್ವಾದಿ ದಿಗಂಬರ ಜೈನ ಮಠದ ಮುಂದಿರುವ ಅಭಿವೃದ್ಧಿ ಮಂತ್ರಗಳಾಗಿವೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರಕುಮಾರ ಆಗಮಿಸಿದ್ದರು. ಡಿ.ಆರ್.ಶಾ ಮಾತನಾಡಿ, ಜೈನ ಸಮುದಾಯದ ವತಿಯಿಂದ ಇನ್ನೂ ಅನೇಕ ಭಟ್ಟಾರಕರನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಜೈನ ಸಮಾಜದ ಆಚಾರ, ವಿಚಾರ ಬೆಳೆಸುವ ಅಗತ್ಯವಿದೆ. ಭಟ್ಟಾರಕ ಪರಂಪರೆ ಬೆಳೆಸುವ ಮೂಲಕ ಸಮಾಜದ ಉದ್ಧಾರಕ್ಕೆ ಮುಂದಾಗಬೇಕಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿದ್ದ ನಾಂದಣಿ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ, ಸಿಂಹನಗದ್ದೆ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಜಿನಕಂಚಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಅಮ್ಮಿನಬಾವಿ-ವರೂರು ಶಾಖಾ ಮಠದ ಧರ್ಮಸೇನ ಭಟ್ಟಾರಕ ಸ್ವಾಮಿಗಳು ಆಶೀರ್ವಚನ ನೀಡಿದರು. ತಾಪಂ ಅಧ್ಯಕ್ಷ ಗುರುಪಾದ ಎಂ. ಹೆಗಡೆ, ಹುಲೇಕಲ್ ಗ್ರಾಪಂ ಅಧ್ಯಕ್ಷೆ ನಾಗೂಬಾಯಿ ಶೇಟ್, ಸ್ವರ್ಣವಲ್ಲೀ ಮಠದ ಪ್ರತಿನಿಧಿ, ವಾದಿರಾಜ ಮಠದ ಪ್ರತಿನಿಧಿಗಳು ಹಾಗೂ ಜೈನ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮುಖ್ಯಸ್ಥರು, ಉದ್ದಿಮೆದಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments