ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಬಿಜೆಪಿಗೆ ಹೋದವರಿಗೆ ಪುನಃ ಕಾಂಗ್ರೆಸ್ಸಲ್ಲಿ ಸ್ಥಾನವಿಲ್ಲ: ಆರ್ವಿಡಿ

Parashurama
Updated On : 14 Feb 2013, 12:34 pm

ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 13
ಅಪರೇಶನ್ ಕಮಲದ ಮೂಲಕ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋದವರು ಪುನಃ  ಕಾಂಗ್ರೆಸ್ ಸೇರ್ಪಡೆಯಾಗಲು ಅವಕಾಶ ಇಲ್ಲ ಎನ್ನುವ ಮೂಲಕ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗೆ ಪರೋಕ್ಷವಾಗಿ ತೆರೆ ಎಳೆದರು.
ನಗರದ ಹೋಟೆಲೊಂದರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಹೋರಾಟ ಹಾಗೂ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಡುತ್ತೇವೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಒಂದು ಮಾತನ್ನು ಸ್ಪಷ್ಟಪಡಿಸಿದ್ದಾರೆ. ಕೇವಲ ಪಕ್ಷ ಗೆಲ್ಲುವುದು ಮುಖ್ಯವಲ್ಲ. ಪಕ್ಷದ ಬಗ್ಗೆ ನಿಷ್ಠೆ ಇರುವುದು ಮುಖ್ಯ. ಪ್ರಾಮಾಣಿಕತೆಯಿಂದ ಪಕ್ಷಕ್ಕೆ ದುಡಿದವರಿಗೆ ಅವಕಾಶ ಮಾಡಿಕೊಡಬೇಕೆಂದು ಹೇಳಿದ್ದಾರೆ ಎಂದರು.
ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ, ಪಕ್ಷಕ್ಕಾಗಿ ಹೋರಾಟ ನಡೆಸಿದವರಿಗೆ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕು. ಇದನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕಿದರೆ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಇದು ತಮ್ಮ ಸ್ಪಷ್ಟ ನಿಲುವು ಎಂದು ದೇಶಪಾಂಡೆ ಹೇಳಿದರು. ಆನಂದ ಅಸ್ನೋಟಿಕರ್ ತಮಗೆ ವಿಮಾನ ನಿಲ್ದಾಣ, ಸಮಾರಂಭ ಹೀಗೆ 2-3 ಬಾರಿ ಭೇಟಿಯಾಗಿದ್ದಾರೆ. ಆದರೆ ಎಲ್ಲಿಯೂ ಕಾಂಗ್ರೆಸ್‌ಗೆ ಬರುವ ಪ್ರಸ್ತಾಪ ಮಾಡಿಲ್ಲ. ತಾವು ಬಿಜೆಪಿಯಲ್ಲೇ ಇರುವುದಾಗಿ ಹೇಳಿದ್ದಾರೆ. ಹೀಗಿದ್ದರೂ ಅಸ್ನೋಟಿಕರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಹೇಗೆ ಹರಡಿದೆಯೋ ತಮಗೆ ಗೊತ್ತಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಈ ಬಾರಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ ಎಂದು ಆರ್.ವಿ. ದೇಶಪಾಂಡೆ ಹೇಳಿದರು. ರಾಜ್ಯದ ಚುನಾವಣೆಯಲ್ಲೂ ಸೋನಿಯಾ ಅವರದ್ದೇ ನಾಯಕತ್ವ ಎಂದು ಪ್ರತಿಪಾದಿಸಿದರು.
ದಾಂಡೇಲಿ ತಾಲೂಕು ಆಗಲಿದೆ: ದಾಂಡೇಲಿ ತಾಲೂಕು ಆಗಬೇಕೆನ್ನುವುದು ಬಹುಕಾಲದ ಬೇಡಿಕೆ. ಆದರೆ ಬಜೆಟ್‌ನಲ್ಲಿ ದಾಂಡೇಲಿಗೆ ತಾಲೂಕಿನ ಸ್ಥಾನಮಾನ ನೀಡಲಾಗಿಲ್ಲ. ಆದರೆ ಬಜೆಟ್‌ಗೆ ಸಂಬಂಧಪಟ್ಟಂತೆ ಪ್ರಶ್ನೆಗಳ ತರುವಾಯ ಮುಖ್ಯಮಂತ್ರಿ ಉತ್ತರ ನೀಡಲಿದ್ದು, ಆ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಘೋಷಣೆ ಮಾಡಲಿದ್ದಾರೆ ಎಂದು ತಾವು ವಿಶ್ವಾಸ ಹೊಂದಿರುವುದಾಗಿ ಆರ್.ವಿ. ದೇಶಪಾಂಡೆ ಹೇಳಿದರು.
ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಇಬ್ಬರೂ ಸಚಿವರಿದ್ದರೂ ಅವರು ಮುಖ್ಯಮಂತ್ರಿ ಮೇಲೆ ಪ್ರಭಾವ ಹೇರುವಲ್ಲಿ ಸಫಲರಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನೌಕಾನೆಲೆ ಎರಡನೇ ಹಂತದಲ್ಲಿ ನಿರ್ಮಿಸಲಿರುವ ವಿಮಾನ ನಿಲ್ದಾಣವನ್ನು ನಾಗರಿಕ ಬಳಕೆಗೂ ನೀಡಬೇಕು ಎಂಬ ಪ್ರಸ್ತಾಪ ಇತ್ತು. ಆದರೆ ಆ ಬಗ್ಗೆ ಬಜೆಟ್‌ನಲ್ಲಿ ಏನನ್ನೂ ಹೇಳಲಾಗಿಲ್ಲ. ಪ್ರವಾಸೋದ್ಯಮ ಅಭಿವದ್ಧಿಗೂ ಒತ್ತು ನೀಡಲಾಗಿಲ್ಲ. ಅರಣ್ಯ ಅತಿಕ್ರಮಣ ಸಮಸ್ಯೆ ಕುರಿತು ಪ್ರಸ್ತಾಪವಾಗಿಲ್ಲ. ಈ ಬಾರಿಯ ಬಜೆಟ್‌ನಿಂದ ಮಲೆನಾಡು ಹಾಗೂ ಉತ್ತರ ಕನ್ನಡಕ್ಕೆ ಸಂಪೂರ್ಣ ನಿರಾಶೆಯಾಗಿದೆ ಎಂದು ಅವರು ಹೇಳಿದರು.
ಮೆಡಿಕಲ್ ಕಾಲೇಜ್ ಆಗಲಿ: ಕಾರವಾರದಲ್ಲಿ ಮೆಡಿಕಲ್ ಕಾಲೇಜ ಆಗಬೇಕೆಂದು ಆನಂದ್ ಹೇಳುತ್ತಿದ್ದಾರೆ. ಶಿರಸಿಯಲ್ಲಿ ಆಗಬೇಕೆಂದು ಮತ್ತೊಬ್ಬರು ಹೇಳುತ್ತಿದ್ದಾರೆ. ಇದಲ್ಲದೆ, ಸರ್ಕಾರಿ ಕಾಲೇಜು ಹಾಗೂ ಖಾಸಗಿ ಕಾಲೇಜು ವಿವಾದವೂ ತಲೆ ಎತ್ತಿದೆ. ಇಂತಹ ವಿಷಯದಲ್ಲಿ ಕೇವಲ ವಾದ-ವಿವಾದ ಹಾಗೂ ರಾಜಕಾರಣಕ್ಕೆ ಅವಕಾಶ ಆಗಬಾರದು. ಸರ್ಕಾರಿ ಕಾಲೇಜ್ ಆಗಲಿ, ಇಲ್ಲ ಖಾಸಗಿ ಕಾಲೇಜ್ ಆಗಲಿ, ಮೊದಲು ಜಿಲ್ಲೆಗೆ ಬರಬೇಕು ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು. ಕೆಪಿಸಿಸಿ ಸದಸ್ಯ ಸತೀಶ ಸೈಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ, ಕೆ.ಶಂಭು ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments