ಶಿಸ್ತು ಪಾಲನಾ ಸಮಿತಿ ರಚಿಸಿ: ತೆಂಗೇರಿ ಒತ್ತಾಯ
ಹೊನ್ನಾವರ: ಜಿಲ್ಲೆಯ ಕಾಂಗ್ರೆಸ್ ಶಿಸ್ತು ಹದಗೆಟ್ಟಂತೆ ತೋರುತ್ತಿದ್ದು, ತಕ್ಷಣ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದು ಶಿಸ್ತು ಪಾಲನಾ ಸಮಿತಿ ರಚಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ತೆಂಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಕಳೆದೆರಡು ತಿಂಗಳಿಂದ ಸೂಕ್ಷ್ಮವಾಗಿ ಗಮನಿಸಿದಾಗ ಜಿಲ್ಲಾ ಕಾಂಗ್ರೆಸ್ ಸದಸ್ಯ ಸ್ಥಾನ ನೀಡಿ ಗೌರವಿಸಲಾಗಿರುವ ಮುಖಂಡರೋರ್ವರು ಜೆಡಿಎಸ್ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಪಕ್ಷದ ನಿಯಮಾವಳಿಯಂತೆ ಆಕ್ಷೇಪಾರ್ಹವಾಗಿದೆ. ಪಕ್ಷದ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲೂ ಪಕ್ಷ ವಿಶ್ವಾಸದಿಂದ ಅವರನ್ನು ಪರಿಗಣಿಸಿತ್ತು. ಕಳೆದ ಬಾರಿ ನಡೆದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಟಿಕೇಟ್ ನೀಡುವ ಸಂದರ್ಭದಲ್ಲೂ ಪಕ್ಷ ಅವರ ಮಾರ್ಗದರ್ಶನ ಪಡೆದಿತ್ತು. ಜಿಪಂ, ತಾಪಂ ಚುನಾವಣೆಗೆ ಟಿಕೇಟ್ ನೀಡುವ ಸಂದರ್ಭದಲ್ಲಿ ಮುರ್ಡೇಶ್ವರದಲ್ಲಿ ಪಕ್ಷದ ಹಿರಿಯ ನಾಯಕ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾದ ನನ್ನನ್ನು ಹೊರಗಿಟ್ಟು ಆಯ್ಕೆ ಸಮಿತಿಯ ಸದಸ್ಯರಲ್ಲದ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅವರ ಆಶಯದಂತೆ ಮಹತ್ವದ ನಿರ್ಣಯ ಕೈಗೊಂಡಿದ್ದರು. ಕಳೆದೆರಡು ತಿಂಗಳುಗಳಿಂದ ಹಾಲಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿರುವ ಅವರು ಬಹಿರಂಗವಾಗಿ ಜೆಡಿಎಸ್ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೆಡಿಎಸ್ ಶಾಸಕರ ಪಾದಯಾತ್ರೆಯಲ್ಲಿ, ಗ್ರಾಮ ವಾಸ್ತವ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ದಿನನಿತ್ಯ ಮಾಧ್ಯಮದಲ್ಲಿ ಭಾವಚಿತ್ರದೊಂದಿಗೆ ಪತ್ರಿಕಾ ವರದಿಯಾಗುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಗಮನ ಹರಿಸದಿರುವುದು ತೀರಾ ವಿಷಾದದ ಸಂಗತಿಯಾಗಿದೆ. ಈ ಕುರಿತು ಹಲವಾರು ಬಾರಿ ಪತ್ರಿಕಾ ವರದಿಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತಂದರೂ ಸೂಕ್ತ ಕ್ರಮ ವಾಗಿಲ್ಲ. ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅವರ ಗಾಢವಾದ ವೈಯಕ್ತಿಕ ಸ್ನೇಹ ಜಿಲ್ಲಾಧ್ಯಕ್ಷರಿಗೆ ಅಡ್ಡಿಯಾಗಿರಬಹುದು. ಜಿಲ್ಲಾ ಕಾಂಗ್ರೆಸ್‌ನಲ್ಲಿ ಇಂತಹ ಅಶಿಸ್ತು ಪುನರಾವರ್ತನೆ ಆಗದಂತೆ ತಕ್ಷಣ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದು ಶಿಸ್ತು ಪಾಲನಾ ಸಮಿತಿ ರಚಿಸುವಂತೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಜಗದೀಪ ತೆಂಗೇರಿ ಒತ್ತಾಯಿಸಿದ್ದಾರೆ.
ಇಂದು ಶೋಭಾಯಾತ್ರೆ
ಕಾರವಾರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನ ಹೊಸಾಳಿ ಗ್ರಾಮದಲ್ಲಿ ಫೆ. 14ರ ಸಂಜೆ 4 ಗಂಟೆಗೆ ಶೋಭಾಯಾತ್ರೆ ಹಮ್ಮಿಕೊಂಡಿದೆ. ಶೋಭಾಯಾತ್ರೆಗೆ ಅಂಗಡಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಗುರುನಾಥ ನಾಯ್ಕ ಚಾಲನೆ ನೀಡಲಿದ್ದಾರೆ. ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಡಗೇರಿ ಗ್ರಾಪಂ ಅಧ್ಯಕ್ಷೆ ಗೀತಾ ವಿಲಾಸ ರಾಣೆ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ರೇವಣ ಸಿದ್ಧಪ್ಪ ಮತ್ತಿರರು ಇರುವರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.