ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಅಮದಳ್ಳಿ ಸುಗ್ಗಿ ಕುಣಿತಕ್ಕೆ ಮೆಚ್ಚುಗೆ

Parashurama
Updated On : 15 Feb 2013, 12:22 pm

ಕಾರವಾರ:  ಹರಿಯಾಣ ರಾಜ್ಯದ ಸೂರಜ್‌ಕುಂಡದಲ್ಲಿ ಈಚೆಗೆ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಸಂಘಟಿಸಲಾದ 27ನೇ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಕಾರವಾರ ತಾಲೂಕಿನ ಬಂಟದೇವ ಯುವಕ ಸಂಘ ಅಮದಳ್ಳಿಯ ಸುಗ್ಗಿ ಕುಣಿತದ ಕಲಾಪ್ರಕಾರ ಜನಮೆಚ್ಚುಗೆ ಗಳಿಸಿದೆ.
ಈ ವರ್ಷದ ಮೇಳಕ್ಕೆ ಕರ್ನಾಟಕದ ಉತ್ತಮ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಕಾರವಾರದ ಬಂಟದೇವ ಯುವಕ ಸಂಘವೂ ಒಂದು. ಹೊಸ ವಸ್ತ್ರವಿನ್ಯಾಸದೊಂದಿಗೆ ಕಲೆ ಪ್ರದರ್ಶಿಸಿದ ಸುಗ್ಗಿ ಕುಣಿತ ತಂಡಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಬಸವರಾಜು, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ವ್ಯವಸ್ಥಾಪಕ ಎಸ್.ಒ. ಬಾವಿಕಟ್ಟಿ, ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ, ಮಾರ್ಗದರ್ಶಕ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ, ಜಾನಪದ ಕಲಾವಿದ ಸಬನಳ್ಳಿ ರಾಜು, ಜಗಲಿ ಸಿದ್ದರಾಜು ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದರು. ಸುಗ್ಗಿ ಕುಣಿತದೊಂದಿಗೆ ಸ್ಥಳೀಯ ಯುವಜನರು, ಮಕ್ಕಳು, ಮಹಿಳೆಯರು ಮತ್ತು ವಿದೇಶಿಗರು ಹೆಜ್ಜೆ ಹಾಕಿ ಕಲಾತಂಡಕ್ಕೆ ಪ್ರೋತ್ಸಾಹ ನೀಡಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹರಿಯಾಣದ ಮುಖ್ಯಮಂತ್ರಿ ಭೂಷಣ ಸಿಂಗ್, ರಾಜ್ಯಪಾಲ ನಾರಾಯಣ ರಾವ್, ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಂತ್ರಿ ಆನಂದ ಸಿಂಗ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುಗ್ಗಿ ಕುಣಿತ ಕಲಾ ತಂಡ ಜಮ್ಮು ಕಾಶ್ಮೀರ, ಶಿಮ್ಲಾ, ಅಮೃತಸರ, ವಾಘಾಗಡಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದೆ. ಅಮೃತಸರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಂಜುನಾಥ ಕೆ. ಮುದ್ಗೇಕರ ಮತ್ತು ಪುರುಷೋತ್ತಮ ಗೌಡ ಅವರು ರಕ್ತದಾನ ಮಾಡುವುದರ ಮೂಲಕ ತಮ್ಮ ಸೇವೆ ಸಲ್ಲಿಸಿದರು. ಕಲಾ ತಂಡದಲ್ಲಿ ರಾಜು ಹರಿಕಂತ್ರ, ಶ್ರೀನಿವಾಸ ಅಂಬಿಗ, ನಾಗರಾಜ ಗೌಡ, ಕವಿತಾ ಮಡಿವಾಳ, ಉಷಾ ಗೌಡ, ವಿನೋದ ಗೌಡ, ಸುನೀಲ ಗೌಡ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement