ಸಮಾಜಮುಖಿ ಕಾರ್ಯಗಳಿಗೆ ಸ್ಪಂದನೆ ನೀಡಿ
ಹಗರಿಬೊಮ್ಮನಹಳ್ಳಿ: ಇಂದಿನ ದಿನಮಾನಗಳಲ್ಲಿ ಸಮಾಜಮುಖಿ ಕಾರ್ಯಗಳಿಗೆ ಸ್ಪಂದನೆ ಕೊಡುವ ಮೂಲಕ ಸಮಾಜ ಸುಧಾರಣೆಗೆ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಸ್ಥಿರಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯಿತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರುಗಳ 5ನೇ ವರ್ಷದ ಪೀಠಾರೋಹಣ ಸಮಾರಂಭದ ನಿಮಿತ್ತ ಗುರುವಾರ ಪಟ್ಟಣದ ರಾಮನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ನಿಮ್ಮ ದುಡಿಮೆಯಲ್ಲಿ ಒಂದಿಷ್ಟು ಲಾಭಾಂಶವನ್ನು ಸಮಾಜದ ಸೇವೆಗಾಗಿ ಮೀಸಲಿಡುವುದನ್ನು ರೂಢಿಮಾಡಿಕೊಳ್ಳಬೇಕು. ಹಣವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಉಚಿತ ನೇತ್ರ, ಆರೋಗ್ಯ ತಪಾಸಣೆ, ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಗಳಿಗೆ ಸಹಾಯ, ಸಹಕಾರ ನೀಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮಗಳ ಜಾರಿಯಲ್ಲಿ ಎಲ್ಲರೂ ಪಾಲುದಾರರಾಗಿ ಎಂದು ಕರೆ ನೀಡಿದರು.
ಪ್ರೋತ್ಸಾಹ ನೀಡಿ: ಕಣ್ಣು ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿ. ದುಶ್ಚಟಗಳಿಗೆ ದಾಸರಾಗಿ ಕಣ್ಣಿನ ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಬೇಡಿ ಎಂದ ಶ್ರೀಗಳು, ದೃಷ್ಟಿಹೀನರಿಗೆ ದೃಷ್ಟಿ ನೀಡುವ ಕಾಯಕವನ್ನು ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ರೋಟರಿ ಕ್ಲಬ್‌ಗಳು ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಹಲವು ವರ್ಷಗಳಿಂದಲೂ ಮಾಡುತ್ತಲಿವೆ. ಇಂತಹ ಸಂಸ್ಥೆಗಳ ಕಾರ್ಯಗಳಿಗೆ ಸಾರ್ವಜನಿಕರು ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.
ರೋಟರಿ ಕ್ಲಬ್, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ವಿವೇಕಾನಂದ ಕಣ್ಣಿನ ಆಸ್ಪತ್ರೆ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಪೀಠಾರೋಹಣದ ಅಂಗವಾಗಿ ಆಯೋಜಿಸಿರುವ ಉಚಿತ ಕಣ್ಣಿನ ತಪಾಸಣೆಯಲ್ಲಿ ನೂರಾರು ಜನರು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡರು. ವೀರಶೈವ ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಅಕ್ಕಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷ ಬಿ. ನಾಗನಗೌಡ ಶಿಬಿರ ಉದ್ಘಾಟಿಸಿದರು.
ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ನಿಕಟಪೂರ್ವ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾಧ್ಯಕ್ಷ ಬಪ್ಪಖಾನ್ ಕುಮಾರಸ್ವಾಮಿ, ರೋಟರಿ ಕ್ಲಬ್ ಅಧ್ಯಕ್ಷ ಅಂಬಾಡಿ ನಾಗರಾಜ, ತಹಸೀಲ್ದಾರ್ ನಾಗರಾಜ ಭಟ್, ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಪ್ರಕಾಶರೆಡ್ಡಿ, ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಾವಿ ಶಶಿಧರ, ಉಪ್ಪಾರಗಟ್ಟಿ ವೀರನಗೌಡ, ಎಚ್.ಪಿ. ಶಿವಶಂಕರಗೌಡ, ಭದ್ರವಾಡಿ ವಿನಯಕುಮಾರ, ಯುವ ಘಟಕದ ತಾಲೂಕಾಧ್ಯಕ್ಷ ಬ್ಯಾಡಗಿ ರಾಜೇಶ ಭಾಗವಹಿಸಿದ್ದರು.
ಪಂಚಮಸಾಲಿ ಯುವ ಘಟಕದ ರಾಜ್ಯಾಧ್ಯಕ್ಷ ಹನಸಿ ಸಿದ್ದೇಶ್ ಸ್ವಾಗತಿಸಿ, ಎಚ್.ಎಸ್. ಕೊಟ್ರೇಶ್ ನಿರೂಪಿಸಿದರು.