ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಘಟ್ಟದ ಮೇಲೆ ಶಾಂತಿಯುತ ಮತದಾನ

Parashurama
Updated On : 8 Mar 2013, 11:18 am

ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 7
ಘಟ್ಟದ ಮೇಲಿನ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಲ್ಲಾಪುರವನ್ನು ಹೊರತುಪಡಿಸಿ ಉಳಿದಂತೆ ಎಲ್ಲೆಡೆ ಶಾಂತಿಯುತ ಮತದಾನವಾಗಿದೆ.
ಶಿರಸಿ ನಗರಸಭೆ ಚುನಾವಣೆಯಲ್ಲಿ 31 ವಾರ್ಡ್‌ಗಳಿಂದ ಶೇ. 68.16ರಷ್ಟು ಮತದಾನವಾಗಿದೆ. ಶಿರಸಿಯಲ್ಲಿ 41276 ಮತದಾರರಿದ್ದು 28133 ಜನರು ಮತ ಚಲಾವಣೆ ಮಾಡಿದ್ದಾರೆ. 20991 ಪುರುಷ ಮತದಾರರಲ್ಲಿ 14259 ಹಾಗೂ 20285 ಮಹಿಳಾ ಮತದಾರರಲ್ಲಿ 13874 ಜನರು ಮತ ಚಲಾಯಿಸಿದ್ದಾರೆ.
ಯಲ್ಲಾಪುರದಲ್ಲಿ ಮತದಾರರ ಯಾದಿಯಲ್ಲಿ ತೀವ್ರ ಗೊಂದಲ ಉಂಟಾಗಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ವಿಫಲರಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಘಟನೆಯೂ ನಡೆದಿದೆ. ಒಂದೇ ಕುಟುಂಬದ ಸದಸ್ಯರು ಹಲವಾರು ವಾರ್ಡ್‌ಗಳಲ್ಲಿ ಮತ ಚಲಾಯಿಸಿದ ಪರಿಸ್ಥಿತಿಯೂ ಉದ್ಭವವಾಗಿದೆ. ಒಟ್ಟಾರೆ ಪಟ್ಟಣದಾದ್ಯಂತ ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಂಡಿದ್ದು ಅಧಿಕಾರಿಗಳ ಹಾಗೂ ಚುನಾವಣೆಯ ಕಾರ್ಯವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯಲ್ಲಾಪುರ ಪಪಂಗೆ ನಡೆದ ಚುನಾವಣೆಯಲ್ಲಿ ಶೇ. 70.71ರಷ್ಟು ಮತದಾನವಾಗಿದೆ.
ಮತದಾನದಿಂದ ವಂಚಿತ: ವಾರ್ಡ್ ನಂ. 3ರಲ್ಲಿ ಮಹಿಳೆಯರೂ ಸೇರಿದಂತೆ 50ಕ್ಕೂ ಹೆಚ್ಚು ಮತದಾರರು ಚೀಟಿ ಹೊಂದಿದ್ದರೂ ಮತದಾನದಿಂದ ವಂಚಿತರಾಗಿದ್ದಾರೆ. ಮತದಾರರು ರಾಜಕೀಯ ಪಕ್ಷಗಳ ಮುಖಂಡರ ಎದುರಿನಲ್ಲಿ ತಮ್ಮ ಮತದಾರರ ಹಕ್ಕನ್ನು ಕಸಿದುಕೊಂಡಿರುವ ಕುರಿತಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅವರೆಲ್ಲರೂ ಅಸಹಾಯಕರಾಗಿ ಅಧಿಕಾರಿಗಳ ಕಡೆಗೆ ನೋಡುತ್ತಿದ್ದರು. ಮತದಾರರ ಗುರುತುಪತ್ರವನ್ನು ಹೊಂದಿದ್ದರೂ ಯಾದಿಯಲ್ಲಿ ಹೆಸರಿಲ್ಲ ಎನ್ನುವ ಕಾರಣಕ್ಕಾಗಿ ಪಟ್ಟಣದ ಹಲವಾರು ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾನ ಮಾಡಲು ಅಧಿಕಾರಿಗಳು ಅವಕಾಶವನ್ನೇ ನೀಡಿಲ್ಲ. ಇದರಿಂದಾಗಿ ಪಟ್ಟಣದ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಯಾದಿಯಲ್ಲಿ ನಿಮ್ಮ ಹೆಸರಿಲ್ಲ. ನಾವು ಏನೂ ಸಹಕರಿಸಲು ಸಾಧ್ಯವಿಲ್ಲ ಎನ್ನುವ ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾ ಮತದಾನ ಮುಗಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದರು. ಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವ ಸ್ಥಳೀಯ ಸಂಸ್ಥೆಗಳ ಈ ಚುನಾವಣೆಯಲ್ಲೇ ಇಷ್ಟೊಂದು ಅಧ್ವಾನವಾಗಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಇನ್ನೆಷ್ಟು ಮತದಾರರು ತಮ್ಮ ಮತ ಚಲಾವಣೆಯ ಹಕ್ಕು ಕಳೆದುಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಸಿದ್ದಾಪುರದಲ್ಲಿ ಬುಧವಾರ ಹೊಡೆದಾಟದ ಘಟನೆ ಮತದಾರರಲ್ಲಿ ಭೀತಿಯನ್ನುಂಟು ಮಾಡಿದ್ದು ಮತದಾರರು ಮುಕ್ತ ಮನಸ್ಸಿನಿಂದ ಮತ ಚಲಾಯಿಸಲು ಮುಂದೆ ಬಂದಿಲ್ಲ ಎನ್ನುವ ಮಾತು ಚಲಾವಣೆಯಲ್ಲಿದೆ. ಸಿದ್ದಾಪುರ ಪಪಂ ಚುನಾವಣೆಯಲ್ಲಿ ಶೇ. 75.66ರಷ್ಟು ಮತ ಚಲಾವಣೆಯಾಗಿದೆ.
  ದಾಂಡೇಲಿ ನಗರಸಭಾ ಚುನಾವಣೆಯಲ್ಲಿ ಶೇ. 68.38ರಷ್ಟು ಮತದಾನ ನಡೆದಿದೆ. ಮುಂಡಗೋಡ ಪಪಂ ಚುನಾವಣೆಯಲ್ಲಿ ಶೇ. 79.29ರಷ್ಟು ಮತದಾರರು ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments