ಪಿಎಸ್ಐ ವಿರುದ್ಧ ಕಾಂಗ್ರೆಸ್ ದೂರು
ಹೊನ್ನಾವರ: ಸ್ಥಳೀಯ ಪಿಎಸ್ಐ ಜೋಯ್ ಅಂತೋನಿ ಇವರು ಜೆಡಿಎಸ್ ಚುನಾವಣಾ ಏಜೆಂಟರಂತೆ ವರ್ತಿಸುತ್ತಿರುವುದಾಗಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದ್ದು, ಅವರನ್ನು ತಕ್ಷಣ ಚುನಾವಣಾ ಕರ್ತವ್ಯದಿಂದ ವಿಮುಕ್ತಿಗೊಳಿಸುವಂತೆ ಆಗ್ರಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ ಗಾಯತ್ರಿ ನಾಯಕ ಇವರಿಗೆ ಮನವಿ ಸಲ್ಲಿಸಿದ ವಿದ್ಯಮಾನ ಗುರುವಾರ ಪಪಂ ಚುನಾವಣಾ ಸಂದರ್ಭದಲ್ಲಿ ನಡೆದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಸಲ್ಲಿಸಿದ ದೂರಿನಲ್ಲಿ ಹೊನ್ನಾವರ ಪಪಂ ವಾರ್ಡ್ ನಂ 16ರಲ್ಲಿ ಮತಗಟ್ಟೆ ಅಧಿಕಾರಿಯೋರ್ವರು ಜೆಡಿಎಸ್ ಪರವಾಗಿ ಮತನೀಡಲು ಹೇಳುತ್ತಿದ್ದಾರೆಂದು ಮತದಾರರು ಆಕ್ಷೇಪಿಸಿದಾಗ ನಮ್ಮ ಪಕ್ಷದ ಅಭ್ಯರ್ಥಿ ಮತ್ತು ಏಜೆಂಟರು ಹಾಗೂ ಕಾರ್ಯಕರ್ತರು ಆಕ್ಷೇಪಿಸಿದರು. ಆಗ ಪಿಎಸ್ಐ ಅಲ್ಲಿಗೆ ಧಾವಿಸಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಲಾಠಿ ಹಿಡಿದು ದೂಡಿ ಓಡಿಸಿದ್ದಾರೆ. ಈ ವಿಷಯ ತಿಳಿದ ನಾನು ಆರ್.ಒ. ಚಿದಂಬರ ಅವರಿಗೆ ವಿಷಯ ತಿಳಿಸಿ ಆಕ್ಷೇಪಿಸಿದೆ. ತಕ್ಷಣ ಆರ್ಒ ಚಿದಂಬರ ಇವರು ಮತಗಟ್ಟೆ ಅಧಿಕಾರಿಯನ್ನು ಬದಲಾಯಿಸಿ ನ್ಯಾಯಯುತ ಚುನಾವಣೆಗೆ ಅವಕಾಶ ಮಾಡಿಕೊಟ್ಟರು. ಹೊನ್ನಾವರ ಪಿಎಸ್ಐ ಜೆಡಿಎಸ್ ಏಜೆಂಟರಂತೆ ನಡೆದುಕೊಳ್ಳುತ್ತಿದ್ದು, ನ್ಯಾಯಯುತ ಚುನಾವಣೆಗೆ ಅಡ್ಡಿಪಡಿಸುತ್ತಿದ್ದಾರೆ. ತಕ್ಷಣ ಅವರನ್ನು ಚುನಾವಣಾ ಕರ್ತವ್ಯದಿಂದ ವಿಮುಕ್ತಿಗೊಳಿಸಿ ನ್ಯಾಯಯುತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ 1 ಗಂಟೆ ನಂತರ ತಹಸೀಲ್ದಾರ್ ಕಚೇರಿ ಬಳಿ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಲ್ಲಿಸಿದ ಮನವಿಯಲ್ಲಿ ದೂರಿದೆ. ಮನವಿ ಸ್ವೀಕರಿಸಿದ ತಹಸೀಲ್ದಾರ ಗಾಯತ್ರಿ ನಾಯಕರವರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.