6 ಅರಣ್ಯ ಸಮಿತಿಗೆ ರು. 1.37 ಕೋಟಿ
ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 9
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾ. 8ರಂದು ಪಶ್ಚಿಮಘಟ್ಟ ಕಾರ್ಯಪಡೆಯವರ 'ಹಸಿರು ಹೆಜ್ಜೆ' ಪುಸ್ತಕವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ 6 ಅರಣ್ಯ ಸಮಿತಿಗಳಿಗೆ ರು. 1.37 ಕೋಟಿ ಚೆಕ್ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಅರಣ್ಯ ಇಲಾಖೆ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ ಈ ಕಾರ್ಯಕ್ರಮ ಆಯೋಜನೆ ಮಾಡಿವೆ. ಹಸಿರು ಹೆಜ್ಜೆ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಈ ಪುಸ್ತಕ ಪ್ರಕಟಿಸಿದ ಕಾರ್ಯಪಡೆಯವರಿಗೆ ಅಭಿನಂದಿಸುತ್ತೇನೆ. 4-5 ವರ್ಷಗಳಲ್ಲಿ ಪಶ್ಚಿಮಘಟ್ಟ ರಕ್ಷಣೆಗೆ ಜನರ ಸಹಭಾಗಿತ್ವದಲ್ಲಿ ಕೈಗೊಂಡ ನವೀನ ವೈವಿಧ್ಯಮಯ ಕಾರ್ಯಚಟುವಟಿಕೆ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಅರಣ್ಯ ರಕ್ಷಣೆ ಯೋಜನೆ ರೂಪಿಸಲು ಕಾರ್ಯಪಡೆ ಬಹಳ ಶ್ರಮವಹಿಸಿದೆ. ಗ್ರಾಮ ಅರಣ್ಯ ಸಮಿತಿಗಳ ಮೂಲಕ ಅರಣ್ಯ ಅಭಿವೃದ್ಧಿ ಮತ್ತು ಗ್ರಾಮ ಅಭಿವೃದ್ಧಿ ಸಾಧ್ಯ ಎಂಬುದನ್ನು ನಮ್ಮ ರಾಜ್ಯದಲ್ಲಿ ತೋರಿಸಲಾಗಿದೆ. ಪರಿಸರ ಪ್ರವಾಸೋದ್ಯಮ, ಔಷಧಿ ಗಿಡಮೂಲಿಕೆ ರಕ್ಷಣೆ, ಕಾಡಿನ ಬೆಂಕಿ ತಡೆ ಅರಣ್ಯ ಕಳ್ಳ ಸಾಗಾಣಿಕೆ ತಡೆ ಇತ್ಯಾದಿ ಕಾರ್ಯಗಳಲ್ಲಿ ನಮ್ಮ ರಾಜ್ಯದ ಅರಣ್ಯ ಸಮಿತಿಗಳು ಉತ್ತಮ ಸಹಕಾರ ನೀಡುತ್ತಿವೆ ಎಂದರು.
ಪಾಲು ಯೋಜನೆ: ಈಗಾಗಲೇ 210 ಅರಣ್ಯ ಸಮಿತಿಗಳಿಗೆ ಪಾಲಿಸಿದರೆ ಪಾಲು ಎಂಬ ಯೋಜನೆಯಲ್ಲಿ ರು. 16 ಕೋಟಿ ನೀಡಲಾಗಿದೆ. ಸೌರದೀಪ, ಗೋಬರ್ ಗ್ಯಾಸ್, ಜೇನುಪೆಟ್ಟಿಗೆ, ಹಣ್ಣಿನ ಗಿಡಗಳನ್ನು 310 ಗ್ರಾಮಗಳಲ್ಲಿ ವಿತರಿಸಲಾಗಿದೆ. ಗ್ರಾಮ ಅರಣ್ಯ ಸಮಿತಿಗಳ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ವನವಾಸಿಗಳಿಗೆ ತಲುಪಿಸಲು ಅರಣ್ಯ ಇಲಾಖೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಜೊತೆಗೂಡಿ ಕಾರ್ಯಕ್ರಮ ಯೋಜನೆ ರೂಪಿಸಬೇಕು. ರಾಜ್ಯದ 36 ಗ್ರಾಮಗಳಲ್ಲಿ ಇಂಧನ ಸ್ವಾವಲಂಬನೆ ಸಾಧಿಸಲಾಗಿದೆ. ಹಸಿರು ಸಮೃದ್ಧಿ ಗ್ರಾಮ ಎಂದು ಇವುಗಳನ್ನು ಘೋಷಿಸಲಾಗಿದೆ. ಜಂಟಿ ಅರಣ್ಯ ನಿರ್ವಹಣೆ ಯೋಜನೆಯಲ್ಲಿ 15 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಒಟ್ಟು 5000 ಗ್ರಾಮ ಅರಣ್ಯ ಸಮಿತಿಗಳಿವೆ. ಅರಣ್ಯ ಇಲಾಖೆಗೆ ರಕ್ಷಣೆ ಮತ್ತು ಅಭಿವೃದ್ಧಿಗಾಗಿ 2013-14ರಲ್ಲಿ ರು. 1115 ಕೋಟಿ ಬಜೆಟ್ನಲ್ಲಿ ನೀಡಲಾಗಿದೆ. ಈ ಯೋಜನೆಗಳ ಜಾರಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳು ಪಾಲ್ಗೊಳ್ಳಬೇಕು ಎಂದರು.
ಇಂದು ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮ ಅರಣ್ಯ ಸಮಿತಿಗೆ ರು. 56.08 ಲಕ್ಷ ಚೆಕ್ ನೀಡುತ್ತಿದ್ದೇವೆ. ಅದೇ ರೀತಿ ಹೊಸನಗರ ತಾಲೂಕಿನ ಕೆ. ಹುಣಸವಳ್ಳಿ ಗ್ರಾಮಕ್ಕೆ ರು. 38 ಲಕ್ಷ, ಬೆಳಗಾವಿಯ ಬಿಜಗರಣೆ ಗ್ರಾಮಕ್ಕೆ ರು. 24.9 ಲಕ್ಷ, ಕುರವಾಡ ಗ್ರಾಮಕ್ಕೆ ರು. 5.76 ಲಕ್ಷ, ಸಾಗರದ ಹೆಗ್ಗೋಡು ಗ್ರಾಮಕ್ಕೆ ರು. 6.1 ಲಕ್ಷ, ಮುಳಗುಂದ ಗ್ರಾಮಕ್ಕೆ ರು. 5.7 ಲಕ್ಷ ನೀಡುತ್ತಿದ್ದೇವೆ. ಜೀವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು, ಆರ್. ಶ್ರೀಧರನ್, ಪ್ರಧಾನ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಬಿ.ಕೆ. ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮುಂತಾದ ಅರಣ್ಯ ಅಧಿಕಾರಿಗಳು, 4 ಜಿಲ್ಲೆಗಳ ಗ್ರಾಮಗಳ ಅರಣ್ಯ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.