ಯುಗಾದಿ ಉತ್ಸವ ಪೂರ್ವಭಾವಿ ಸಭೆ
ಶಿರಸಿ: ಶಿರಸಿ ನಗರದ ಯೋಗವುಂದಿರದಲ್ಲಿ ಇತ್ತೀಚೆಗೆ ಯುಗಾದಿ ಉತ್ಸವದ ಪೂರ್ವಭಾವಿ ಸಭೆ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು. ಇತ್ತೀಚಿಗೆ ಯುಗಾದಿಯ ಸಂಭ್ರಮ ಹಾಗೂ ಉತ್ಸಾಹ ಕಡಿಮೆಯಾಗಿರುವುದು ವಿಷಾದನೀಯ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಯುಗಾದಿ ಉತ್ಸವ ನಿಮಿತ್ತ ಶೋಭಾಯಾತ್ರೆ ಹಮ್ಮಿಕೊಳ್ಳಬೇಕು. ಧಾರ್ಮಿಕ ಮಹಾಮಂಡಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಯುಗಾದಿ ಆಚರಿಸುವಂತೆ ಶ್ರೀಗಳು ತಿಳಿಸಿದರು.
ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ಹೊಸ ವರ್ಷದ ಆಚರಣೆಯನ್ನು ಡಿ. 31ರ ರಾತ್ರಿ ನಡೆಸುವ ಬದಲು ಯುಗಾದಿಯೊಂದಿಗೆ ಆಚರಿಸಬೇಕು. 13 ವರ್ಷಗಳ ಹಿಂದೆ ಶಿರಸಿಯ ಕೆಲವೇ ಯುವಕರು ಯುಗಾದಿ ಆಚರಣೆಯನ್ನು ಸಾರ್ವಜನಿಕ ಉತ್ಸವವನ್ನಾಗಿ ಆಚರಿಸಿದರು. ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜ. 1ರ ಆಚರಣೆಗೆ ಯಾವುದೇ ಹಿನ್ನೆಲೆ ಇಲ್ಲ. ಆದರೆ ಯುಗಾದಿಗೆ ಅದರದೇ ಆದ ವೈಜ್ಞಾನಿಕ ಹಿನ್ನೆಲೆ ಇದೆ. ಆರ್ಥಿಕ ಹೊಸ ವರ್ಷ ಪ್ರಾರಂಭವಾಗುವುದು ಏಪ್ರಿಲ್ನಲ್ಲಿ. ನಮ್ಮ ಪರಂಪರೆ, ಧಾರ್ಮಿಕ ಆಚರಣೆ, ಸಂಸ್ಕೃತಿ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯುಗಾದಿಯನ್ನು ದೇಶ ವ್ಯಾಪಿ ಸಾರ್ವತ್ರಿಕ ಉತ್ಸವವನ್ನಾಗಿ ಆಚರಿಸಬೇಕು. ದೇವಸ್ಥಾನ ವ್ಯವಹಾರಗಳಲ್ಲಿ ಸರ್ಕಾರ ಮೂಗು ತೋರಿಸುವುದು ನಿಲ್ಲಬೇಕು. ನಮ್ಮ ದೇವಸ್ಥಾನ ಮಠ ಮಂದಿರಗಳಿಗೆ ಸ್ವಾಯತ್ತತೆ ಅಗತ್ಯ ಎಂದರು. ಕೃಷ್ಣ ಎಸಳೆ, ದೀಪಕ ದೊಡ್ಡೂರು, ಕೇಶವ ಮರಾಠೆ, ಚಂದ್ರು ಎಸಳೆ, ಗಂಗಾಧರ ಹೆಗಡೆ ಹಾಗೂ ಸಮಿತಿ ಸದಸ್ಯರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತವಾಗಿರಲಿ
ಶಿರಸಿ: ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಆಚರಣೆಗೆ ಕ್ರಮ ಕೈಗೊಳ್ಳಲು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಉ.ಕ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಸಹಸ್ರಲಿಂಗ, ಬನವಾಸಿ, ಗೋಕರ್ಣ, ಯಾಣ, ಇಡಗುಂಜಿ, ಮುರ್ಡೇಶ್ವರ, ಕಾರವಾರ ಇನ್ನಿತರ ಪ್ರದೇಶಗಳಲ್ಲಿ ಶಿವರಾತ್ರಿಯಂದು ಲಕ್ಷಾಂತರ ಜನರು ಪವಿತ್ರ ಸ್ನಾನ, ಪೂಜೆಗಾಗಿ ಬರುತ್ತಾರೆ. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿ ಮಾಡಬೇಕು. ಈ ಬಗ್ಗೆ ಕಳೆದ ವರ್ಷದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನಗರಸಭೆ, ಪಂಚಾಯಿತಿ ಮೂಲಕ ನೇರ ಕಾರ್ಯಾಚರಣೆ, ಸ್ಥಳ ಭೇಟಿ, ಪೋಸ್ಟರ್, ಬ್ಯಾನರ್, ಕರಪತ್ರ, ಪತ್ರಿಕೆಗಳ ಮೂಲಕ ಪ್ರಚಾರ ಜಾಗೃತಿ ಮೂಡಿಸಬೇಕು. ಹೈಸ್ಕೂಲು, ಎನ್ನೆಸ್ಸೆಸ್ ಮೂಲಕ ಪ್ಲಾಸ್ಟಿಕ್ ತಡೆ ಕಾರ್ಯಕ್ರಮ, ಪ್ಲಾಸ್ಟಿಕ್ ನಿಷೇಧ ಕಾಯಿದೆ ಉಲ್ಲಂಘನೆಗೆ ದಂಡ ಹಾಕುವುದು ಇತ್ಯಾದಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.