ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಕಾರವಾರ: ಬಿಜೆಪಿಗೆ ಅಧಿಕಾರ, ಕೆಜೆಪಿ, ಬಿಎಸ್ಸಾರ್ ಧೂಳೀಪಟ

Parashurama
Updated On : 12 Mar 2013, 11:05 am

ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 11
ಉತ್ತರ ಕನ್ನಡದ ಕರಾವಳಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾರವಾರ ನಗರಸಭೆ, ಕುಮಟಾ ಪುರಸಭೆ ಹಾಗೂ ಅಂಕೋಲಾ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಆದರೆ ಕಾರವಾರದಲ್ಲಿ ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಭಟ್ಕಳದಲ್ಲಿ ತಂಜಿಂ ಬೆಂಬಲಿತ ಪಕ್ಷೇತರರು ಬಹುಮತ ಗಳಿಸಿದ್ದಾರೆ. ಹೊನ್ನಾವರದಲ್ಲಿ ಬಹುಮತ ಗಳಿಸದಿದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಕೆಜೆಪಿ ಹಾಗೂ ಬಿಎಸ್‌ಆರ್ ಪಕ್ಷಗಳು ಧೂಳೀಪಟವಾಗಿವೆ.
ಕಾರವಾರ ನಗರಸಭೆ: ಕಾರವಾರ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ತಲಾ 13 ಸ್ಥಾನ ಗಳಿಸಿವೆ. 5 ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ತಲಾ 13 ಸ್ಥಾನ ಗಳಿಸಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿಯ ಬಲ 16ಕ್ಕೇರಿದಂತಾಗಿದೆ. ಪಕ್ಷೇತರರ ಓಲೈಕೆಯಲ್ಲಿ ಬಿಜೆಪಿ ಅದರಲ್ಲೂ ಸಚಿವ ಆನಂದ್ ಯಶಸ್ವಿಯಾಗಿದ್ದಾರೆ. ಸಂಸದ ಹಾಗೂ ಶಾಸಕರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಮತದಾನದ ಹಕ್ಕು ಇರುವುದರಿಂದ ಬಿಜೆಪಿ ಆಡಳಿತ ಖಚಿತವಾಗಿದೆ.
ಕಳೆದ ಅವಧಿಯಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿತ್ತು. ಆದರೆ ಅಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ನ 12 ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೇರಿತ್ತು.
ಅಂಕೋಲಾ ಪಟ್ಟಣ ಪಂಚಾಯಿತಿ: ಅಂಕೋಲಾ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 14 ಸ್ಥಾನಗಳಿದ್ದು, ಬಿಜೆಪಿ 6 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 4 ಸ್ಥಾನ ಗಳಿಸಿದೆ. ಬಿಎಸ್‌ಆರ್ ಪಕ್ಷ 2 ಸ್ಥಾನ ಗಳಿಸಿದ್ದು, ಜೆಡಿಎಸ್ 1 ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ. ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದಾರೆ. ಇಲ್ಲೂ ಕೂಡ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಸಂಸದ ಹಾಗೂ ಶಾಸಕರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಮತದಾನದ ಹಕ್ಕು ಇರುವುದರಿಂದ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಕಳೆದ ಅವಧಿಯಲ್ಲಿ ಬಿಜೆಪಿ 9 ಸ್ಥಾನ ಗಳಿಸಿತ್ತು. ಬಿಜೆಪಿಯದ್ದೇ ಅಧಿಕಾರ ಇತ್ತು.
ಕುಮಟಾ ಪುರಸಭೆ: ಒಟ್ಟು 23 ಸ್ಥಾನಗಳನ್ನು ಹೊಂದಿರುವ ಕುಮಟಾ ಪುರಸಭೆಯಲ್ಲಿ ಜೆಡಿಎಸ್ 10, ಬಿಜೆಪಿ 6, ಕಾಂಗ್ರೆಸ್ 6, ಕೆಜೆಪಿ 1 ಸ್ಥಾನವನ್ನು ಗಳಿಸಿದೆ. ಜೆಡಿಎಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರಕ್ಕೇರಲು ಇತರ ಪಕ್ಷಗಳ ನೆರವನ್ನು ಪಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಕಳೆದ ಬಾರಿಯೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ. ಕಳೆದ ಬಾರಿ ಒಂದು ಅವಧಿಗೆ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಆಡಳಿತ ನಡೆಸಿದ್ದರೆ, ಇನ್ನೊಂದು ಅವಧಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಆಡಳಿತ ನಡೆಸಿತ್ತು.
ಹೊನ್ನಾವರ ಪಟ್ಟಣ ಪಂಚಾಯಿತಿ: ಒಟ್ಟು 18 ಸ್ಥಾನಗಳಿರುವ ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 9, ಬಿಜೆಪಿ 3, ಜೆಡಿಎಸ್ 4 ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಗಳಿಸಿದ್ದಾರೆ. ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆದಿಲ್ಲವಾದರೂ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ.
ಭಟ್ಕಳ ಪುರಸಭೆ: ಒಟ್ಟು 23 ಸ್ಥಾನಗಳಿರುವ ಭಟ್ಕಳ ಪುರಸಭೆಯಲ್ಲಿ ಪಕ್ಷೇತರರು 20 ಸ್ಥಾನಗಳನ್ನು ಗೆದ್ದಿದ್ದಾರೆ. ಇದರಲ್ಲಿ ತಂಜಿಂ ಬೆಂಬಲಿತ 17 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಉಳಿದಂತೆ 2 ಕಾಂಗ್ರೆಸ್ ಹಾಗೂ 1 ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತಂಜಿಂ ಬೆಂಬಲಿತ ಪಕ್ಷೇತರರು ಭಟ್ಕಳದಲ್ಲಿ ಅಧಿಕಾರದ ಗದ್ದುಗೆಗೇರುವುದು ನಿಶ್ಚಿತವಾಗಿದೆ. ಕಳೆದ ಬಾರಿಯೂ ಪಕ್ಷೇತರರದ್ದೆ ಆಡಳಿತವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments