ಮಲೆನಾಡು ಕಾಂಗ್ರೆಸ್ಮಯ
ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 11
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕೆಲವೊಂದು ಪಪಂಗಳಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ. ಆಡಳಿತಾರೂಢ ಬಿಜೆಪಿ ಎಲ್ಲೆಡೆ ಮುಖಭಂಗ ಅನುಭವಿಸಿದೆ.
ಶಿರಸಿ ನಗರಸಭೆಯ 31 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 20 ಸ್ಥಾನ ಗಳಿಸಿರುವ ಕಾಂಗ್ರೆಸ್ ಉಳಿದೆಲ್ಲ ಪಕ್ಷಗಳನ್ನು ಧೂಳೀಪಟ ಮಾಡಿದೆ. ಈವರೆಗೆ ಆಡಳಿತ ನಡೆಸಿದ್ದ ಬಿಜೆಪಿ 10 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಹಿಂದಿನ ಅವಧಿಯಲ್ಲಿ 16 ಸ್ಥಾನ ಗಳಿಸಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. 1 ಸ್ಥಾನದಲ್ಲಿ ಜಯಗಳಿಸುವ ಮೂಲಕ ಬಿಎಸ್ಆರ್ ಕಾಂಗ್ರೆಸ್ ಖಾತೆ ತೆರೆದಿದೆ. ಶೇಕಡಾವಾರು ಮತಗಳ ಲೆಕ್ಕಾಚಾರದಲ್ಲಿ ಜೆಡಿಎಸ್ ಹಿಂದಿನ ಅವಧಿಯಲ್ಲಿ ನಡೆದ ಚುನಾವಣೆಗಿಂತ ಹೆಚ್ಚು ಮತ ಪಡೆದಿದೆ.
ಸಚಿವರ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ: ಸಿದ್ದಾಪುರ ಪಪಂದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 7 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿದ ಹೆಗ್ಗಳಿಕೆಗೆ ಒಳಗಾಗಿದೆ. ಹಿಂದಿನ ಅವಧಿಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಪಪಂ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಇಲ್ಲೂ ಹಿನ್ನಡೆ ಉಂಟಾಗಿದೆ. ಆರು ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ಸಿನಲ್ಲಿದ್ದ ವ್ಯಕ್ತಿಯೋರ್ವರು ತಾಂತ್ರಿಕ ಕಾರಣದಿಂದಾಗಿ ಪಕ್ಷೇತರರಾಗಿ ಆಯ್ಕೆಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಕ್ಷೇತ್ರವಾದ ಶಿರಸಿ-ಸಿದ್ದಾಪುರದಲ್ಲಿ ಪಕ್ಷ ಹಿನ್ನಡೆ ಅನುಭವಿಸಿದೆ.
ಮುಂಡಗೋಡ-ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸದಸ್ಯರಿದ್ದರೂ ಮುಂಡಗೋಡ ಪಪಂನಲ್ಲಿ 2 ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಕಳೆದ ಅವಧಿಯಲ್ಲಿ 6 ಸ್ಥಾನ ಗಳಿಸಿದ್ದ ಬಿಜೆಪಿ ಈಗ ನಾಲ್ಕನ್ನು ಕಳೆದುಕೊಂಡಿದೆ. ಇಲ್ಲಿ ಜೆಡಿಎಸ್ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದ್ದು 6 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ 1 ಸ್ಥಾನ ಕಡಿಮೆ ಗಳಿಸಿ 5 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಿರ್ಣಾಯಕರಾಗಿದ್ದಾರೆ. ಯಲ್ಲಾಪುರ ಪಪಂನಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಪಡೆದುಕೊಂಡಿದ್ದು 18 ವಾರ್ಡ್ಗಳಲ್ಲಿ 12ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಗಮನಾರ್ಹ ಸಾಧನೆ ಮಾಡಿದ್ದು ಕಳೆದ ಅವಧಿಗಿಂತ 5 ಸ್ಥಾನ ಹೆಚ್ಚಿಗೆ ಗಳಿಸಿದೆ. ಹಿಂದಿನ ಅವಧಿಯಲ್ಲಿ 6 ಸ್ಥಾನಗಳಿಸಿದ್ದ ಜೆಡಿಎಸ್ 3ಕ್ಕೆ ತೃಪ್ತಿಪಟ್ಟುಕೊಂಡರೆ ಬಿಜೆಪಿ ಕೂಡ 3 ಸ್ಥಾನ ಗಳಿಸಿ 1ನ್ನು ಕಳೆದುಕೊಂಡಿದೆ.
ಹೊಣೆಹೊತ್ತು ರಾಜಿನಾಮೆ ನೀಡಲಿ: ಹಳಿಯಾಳ ಪಪಂದಲ್ಲಿ ಕಾಂಗ್ರೆಸ್ 15 ಸ್ಥಾನ ಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಜೆಡಿಎಸ್ ಪ್ರಾಬಲ್ಯ ಹೊಂದಿದ್ದ ಹಳಿಯಾಳದಲ್ಲಿ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಬಿಜೆಪಿ ಖಾತೆ ತೆರೆಯಲು ವಿಫಲವಾಗಿದೆ. ದಾಂಡೇಲಿ ನಗರಸಭೆಯ 31 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಕಳೆದ ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಈ ಬಾರಿ 3 ಸ್ಥಾನಗಳನ್ನು ಕಳೆದುಕೊಂಡಿದೆ. ಕೇವಲ 1 ಸ್ಥಾನ ಗಳಿಸಿರುವ ಬಿಜೆಪಿ 4 ಸ್ಥಾನ ಕಳೆದುಕೊಂಡಿದೆ.
ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಜಯಭೇರಿ ಬಾರಿಸುವ ಕಾಂಗ್ರೆಸ್ಸಿನ ಮುಖಂಡರಿಗೆ ಆಶ್ಚರ್ಯ ಉಂಟಾಗಿದೆ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಬಿಜೆಪಿ ದುರಾಡಳಿತ ಮತ್ತು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಬೇಜವಾಬ್ದಾರಿ ಆಡಳಿತದಿಂದಾಗಿ ಜನ ಬೇಸತ್ತಿರುವುದು ಈ ಚುನಾವಣೆಯ ಫಲಿತಾಂಶವೇ ಹೇಳುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ ಅಸ್ನೋಟೀಕರ್ ಸೋಲಿನ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
- ವಿಶ್ವಾಮಿತ್ರ ಹೆಗಡೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.